ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರಣಾಳಿಕೆ ಕಮಿಟಿಯಲ್ಲಿ ಚರ್ಚಿಸದೇ, ಭರವಸೆಗಳನ್ನು ವೇದಿಕೆಯಲ್ಲಿ ಘೋಷಣೆ ಮಾಡುತ್ತಿದ್ದಾರೆ. ನಾಮಕವಾಸ್ತೆ ಪ್ರಣಾಳಿಕೆ ಸಮಿತಿಯಲ್ಲಿ ಇರುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್ ರಾಜೀನಾಮೆ ಪತ್ರ ಬರೆದು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಣಾಳಿಕೆ ಘೋಷಣೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಪರಮೇಶ್ವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತಮ್ಮ ಆಪ್ತರ ಬಳಿಯೂ ಬೇಸರ ಹೊರ ಹಾಕಿದ್ದಾರೆ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಷ್ಟೇ ಏಕೆ, ಡಿಸಿಎಂ, ಪ್ರಬಲ ಖಾತೆಗಳನ್ನೂ ನಿಭಾಯಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ನನ್ನದೆ ಆದ ಕೊಡುಗೆ ಇದೆ. ಪ್ರಸ್ತುತ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಹ ಆಗಿದ್ದೇನೆ. ಆದರೂ ತನ್ನನ್ನ ಕಡೆಗಣಿಸಿ ಉಚಿತ ಯೋಜನೆಗಳ ಘೋಷಣೆ ಮಾಡುತ್ತಿದ್ದಾರೆಂದು ಬೇಸರ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಹಲವು ಬಾರಿ ಅಸಮಾಧಾನ ತೋಡಿಕೊಂಡರೂ ರಾಜ್ಯ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲ್ಲ. ಹೀಗಾಗಿ ಜಿ ಪರಮೇಶ್ವರ್ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.