ಶಾರ್ಜಾ: ಪಾಕಿಸ್ತಾನ ಪ್ರವಾಸಕ್ಕೆ ತೆರಳಿ ಯಾವುದೇ ಪಂದ್ಯವನ್ನು ಆಡದೇ ಭದ್ರತಾ ನೆಪವೊಡ್ಡಿ ತವರಿಗೆ ಮರಳಿದ್ದ ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನ T-20 ವಿಶ್ವಕಪ್’ನಲ್ಲಿ ತಕ್ಕ ಪಾಠ ಕಲಿಸಿದೆ. ಮಂಗಳವರ ರಾತ್ರಿ ನಡೆದ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ, ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್’ಗಳ ಅಂತರದಲ್ಲಿ ಅಮೋಘ ಜಯ ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡಿದ ಪಾಕಿಸ್ತಾನ , ನ್ಯೂಜಿಲೆಂಡ್ ತಂಡವನ್ನು 134ರನ್’ಗಳಿಗೆ ನಿಯಂತ್ರಿಸಿತ್ತು. ಬಲಿಷ್ಠ ನ್ಯೂಜಿಲೆಂಡ್ ಬೌಲಿಂಗ್ ವಿಭಾಗದ ಎದುರು ಪಾಕಿಸ್ತಾನ ಬ್ಯಾಟರ್’ಗಳು ರನ್ ಗಳಿಸಲು ತಡಕಾಡಿದರೂ ಸಹ ಕೊನೆಯ ಓವರ್’ಗಳಲ್ಲಿ ಅನುಭವಿ ಶೋಯೆಬ್ ಮಲಿಕ್ ಹಾಗೂ ಆಸಿಫ್ ಅಲಿ ಸ್ಫೋಟಕ ಬ್ಯಾಟಂಗ್ ನೆರವಿನಿಂದ 18.4 ಓವರ್’ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು.
ಐಸಿಸಿ T-20 ವಿಶ್ವಕಪ್ ಟೂರ್ನಿಯ 2ನೇ ಗುಂಪಿನಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಗೆಲುವು ದಾಖಲಿಸುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೆ ಏರಿದೆ. ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿರುವ ಪಾಕಿಸ್ತಾನ, ಆ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ T-20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.
ಟೂರ್ನಿಯಲ್ಲಿ ಸ್ಕಾಟ್ಲೆಂಟ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದ ಅಫ್ಘಾನಿಸ್ತಾನ ಆ ಪಂದ್ಯದಲ್ಲಿ 130 ರನ್’ಗಳ ಅಂತರದಲ್ಲಿ ದಾಖಲೆಯ ಗೆಲುವು ದಾಖಲಿಸಿತ್ತು. ಆ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಮೊದಲ ಪಂದ್ಯವನ್ನು ಸೋತಿರುವ ನ್ಯೂಜಿಲೆಂಡ್ ಹಾಗೂ ಭಾರತ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದೆ. ಅಕ್ಟೋಬರ್ 31ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳಿಗೂ ಆ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಮಂಗಳವಾರದ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಯಾವುದೇ ಬ್ಯಾಟರ್’ಗಳಿಂದ ಅರ್ಧ ಶತಕ ದಾಖಲಾಗಲಿಲ್ಲ. ಆರಂಬಿಕ ಮಿಚೆಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಡೆವೊನ್ ಕಾನ್ವೆ ತಲಾ 27 ರನ್ ಗಳಿಸಿದರೆ, ನಾಯಕ ಕೇನ್ ವಿಲಿಯಮ್ಸನ್ 25 ರನ್’ಗಳಿಸಿ ನಿರ್ಗಮಿಸಿದರು. ಪಾಕ್ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ್ದ ವೇಗಿ ಹಾರಿಸ್ ರೌಫ್ 4 ಓವರ್’ಗಳಲ್ಲಿ 22 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿದರು. ಕೊನೆಯಲ್ಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ರೌಫ್ ಪಾಲಾಯಿತು. ಭಾರತದ ವಿರುದ್ಧ ಬಿರುಗಾಳಿಯಾಗಿದ್ದ ಶಾಹಿನ್ ಅಫ್ರಿದಿ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು.
ಭಾರತದ ವಿರುದ್ಧ ವಿಕೆಟ್ ಕಳೆದುಕೊಳ್ಳದೆ ವಿಜಯದ ಗುರಿ ತಲುಪಿದ್ದ ಪಾಕಿಸ್ತಾನಕ್ಕೆ, ನ್ಯೂಜಿಲೆಂಡ್ ಬೌಲರ್’ಗಳಿಂದ ದೊಡ್ಡ ಸವಾಲು ಎದುರಿಸಬೇಕಾಯಿತು. ಆರಂಭಿಕ ಬ್ಯಾಟರ್, ಕ್ಯಾಪ್ಟನ್ ಬಾಬರ್ ಅಝಮ್ 9 ರನ್ ಗಳಿಸುವಷ್ಟರಲ್ಲೇ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಫಖರ್ ಜಮಾನ್ ಹಾಗೂ ಅನುಭವಿ ಮೊಹಮ್ಮದ್ ಹಫೀಝ್ ತಲಾ 11 ರನ್’ಗಳಿಸಿ ಮರಳಿದರು. ಪಂದ್ಯವು ಸಮಬಲದ ಹೋರಾಟಕ್ಕೆ ಸಾಗುತ್ತಿರುವಾಗಲೇ ಹಿರಿಯ ಆಲ್’ರೌಡರ್ ಶೋಯೆಬ್ ಮಲಿಕ್ ಹಾಗೂ ಆಸಿಫ್ ಅಲಿ ಸ್ಫೋಟಕ ಬ್ಯಾಟಂಗ್ ನೆರವಿನಿಂದ 18.4 ಓವರ್’ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು.