ಇಸ್ಲಾಮಾಬಾದ್: ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಹಿರಿಯ ಅಧಿಕಾರಿ, ರಾವಲ್ಪಿಂಡಿಯ ಮಾಜಿ ಆಯುಕ್ತ ಲಿಯಾಖತ್ ಅಲಿ ಛತ್ತಾ ಆರೋಪ ಮಾಡಿದ ಬೆನ್ನಲ್ಲೇ ಈ ಕುರಿತು ತನಿಖೆಗೆ ಪಾಕಿಸ್ತಾನ ಚುನಾವಣಾ ಆಯೋಗವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಅಕ್ರಮದಲ್ಲಿ ಚುನಾವಣಾ ಆಯೋಗ ಮತ್ತು ಮುಖ್ಯ ನ್ಯಾಯಮೂರ್ತಿ ಭಾಗಿಯಾಗಿದ್ದಾರೆ ಎಂದೂ ಲಿಯಾಖತ್ ಅಲಿ ಛತ್ತಾ ಟೀಕಿಸಿದ್ದರು. ‘ಅಕ್ರಮದ ಹೊಣೆ ಹೊತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದೂ ಹೇಳಿದ್ದರು.
ರಾವಲ್ಪಿಂಡಿಯಲ್ಲಿಯೇ ಒಟ್ಟು 13 ಅಭ್ಯರ್ಥಿಗಳನ್ನು ಒತ್ತಾಯಪೂರ್ವಕವಾಗಿ ವಿಜಯಿ ಎಂದು ಘೋಷಿಸಲಾಗಿದೆ ಎಂದೂ ಅಧಿಕಾರಿ ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಚುನಾವಣಾ ಆಯೋಗವು ತಳ್ಳಿಹಾಕಿತ್ತು.
ಭಾನುವಾರ ತುರ್ತು ಸಭೆ ನಡೆಸಿದ ಆಯೋಗ, ಹಿರಿಯ ಅಧಿಕಾರಿಯ ಆರೋಪ ಕುರಿತ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಮುಖ್ಯ ಚುನಾವಣಾ ಆಯುಕ್ತ ಸಿಖಂದರ್ ಸುಲ್ತಾನ್ ರಜಾ ವಿಡಿಯೊ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾವಹಿಸಿದ್ದರು.
ಉನ್ನತ ಮಟ್ಟದ ಸಮಿತಿಯು ಈಗ ಆರೋಪ ಕೇಳಿಬಂದಿರುವ ಜಿಲ್ಲೆಗಳ ಚುನಾವಣಾಧಿಕಾರಿಗಳು, ಸಂಬಂಧಿತ ಅಧಿಕಾರಿಗಳ ಹೇಳಿಕೆ ದಾಖಲಿಸಲಿದ್ದು, ಮೂರು ದಿನದಲ್ಲಿ ವರದಿ ಸಲ್ಲಿಸಲಿದೆ. ರಾವಲ್ಪಿಂಡಿ ಆಯುಕ್ತರಾಗಿ ನೇಮಕವಾಗಿರುವ ಸೈಫ್ ಅನ್ವರ್ ಜಪ್ಪಾ, ಚುನಾವಣಾ ಅಕ್ರಮ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಚುನಾವಣಾ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಸಿಇಸಿ ಮತ್ತು ಮುಖ್ಯ ನ್ಯಾಯಮೂರ್ತಿ ರಾಜೀನಾಮೆ ನೀಡಬೇಕು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ಚುನಾವಣಾ ಅಕ್ರಮವನ್ನು ವಿರೋಧಿಸಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಕಾರ್ಯಕರ್ತರು ಭಾನುವಾರ ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಿದ್ದಾರೆ.