Home ಟಾಪ್ ಸುದ್ದಿಗಳು ಶ್ರೀಲಂಕಾ ವಿರುದ್ಧ ದಾಖಲೆಯ ಮೊತ್ತ ಬೆನ್ನಟ್ಟಿ ಗೆದ್ದ ಪಾಕಿಸ್ತಾನ

ಶ್ರೀಲಂಕಾ ವಿರುದ್ಧ ದಾಖಲೆಯ ಮೊತ್ತ ಬೆನ್ನಟ್ಟಿ ಗೆದ್ದ ಪಾಕಿಸ್ತಾನ

ಅಬ್ದುಲ್ಲಾ ಶಫೀಕ್ ಗಳಿಸಿದ 160* ರನ್’ಗಳ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ, 4 ವಿಕೆಟ್’ಗಳ ದಾಖಲೆಯ ಜಯ ಸಾಧಿಸಿದೆ. ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 342 ರನ್’ಗಳ ಗುರಿಯನ್ನ 6 ವಿಕೆಟ್ ನಷ್ಟದಲ್ಲಿ ಬೆನ್ನತ್ತಿದ ಬಾಬರ್ ಅಝಂ ಪಡೆ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಚರಿತ್ರೆಯಲ್ಲೇ ಎರಡನೇ ಅತಿದೊಡ್ಡ ಟೆಸ್ಟ್ ಇನ್ನಿಂಗ್ಸ್ ಚೇಸ್ ಇದಾಗಿದೆ. ಗಾಲೆ ಮೈದಾನದಲ್ಲಿ ತಂಡವೊಂದು ಎರಡನೇ ಇನ್ನಿಂಗ್ಸ್’ನಲ್ಲಿ ಅತಿದೊಡ್ಡ ಮೊತ್ತವನ್ನು ಚೇಸ್ ಮಾಡಿದ ಕೀರ್ತಿಯನ್ನೂ ಪ್ರವಾಸಿ ಪಾಕ್ ಪಡೆ ಈ ಮೂಲಕ ತನ್ನದಾಗಿಸಿಕೊಂಡಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 222 ರನ್ ಗಳಿಸಿದ್ದ ಪಾಕಿಸ್ತಾನಕ್ಕೆ, ಅಂತಿಮ ದಿನದಾಟದಲ್ಲಿ ಗೆಲುವಿಗೆ 120 ರನ್’ಗಳ ಅಗತ್ಯವಿತ್ತು. ಬುಧವಾರ ಕೇವಲ ಒಂದು ವಿಕೆಟ್ ನಷ್ಟದಲ್ಲಿ, ಒಟ್ಟು 127.2 ಓವರ್ಗಳಲ್ಲಿ ಗೆಲುವಿನ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ.

ಆರಂಭಿಕನಾಗಿ ಬಂದು ಅಜೇಯನಾಗಿ ಮರಳಿದ ಶಫೀಕ್

ಪಾಕಿಸ್ತಾನದ ದಾಖಲೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆರಂಭಿಕ ಅಬ್ದುಲ್ಲಾ ಶಫೀಕ್ ಅವರ ತಾಳ್ಮೆಯ ಬ್ಯಾಟಿಂಗ್. 408 ಎಸೆತಗಳನ್ನು ಎದುರಿಸಿದ ಶಫೀಕ್, ಒಂದು ಸಿಕ್ಸರ್ ಮತ್ತು ಏಳು ಬೌಂಡರಿಗಳ ನೆರವಿನಿಂದ 160 ರನ್ ಗಳಿಸಿ ಅಜೇಯರಾಗುಳಿದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಶಫೀಕ್ ಪಾಲಾಯಿತು. ಪಾಕ್ ನಾಯಕ ಬಾಬರ್ ಅಝಂ 55 ರನ್ ಮತ್ತು ಕೀಪರ್ ಮುಹಮ್ಮದ್ ರಿಝ್ವಾನ್ 40 ರನ್ ಗಳಿಸಿ ನಿರ್ಗಮಿಸಿದರು. ಇವರಿಬ್ಬರ ವಿಕೆಟ್ ಪ್ರಭಾತ್ ಜಯಸೂರ್ಯ ಪಾಲಾಯಿತು.

ಐದು ರನ್ ಗಳಿಸಿದ್ದ ಹಸನ್ ಅಲಿ ರೂಪದಲ್ಲಿ ಪಾಕಿಸ್ತಾನದ ಆರನೇ ವಿಕೆಟ್ ಪಡೆಯುವಲ್ಲಿ ಲಂಕಾದ ಬೌಲರ್’ಗಳು ಸಫಲರಾಗಿದ್ದರು. ಈ ವೇಳೆ ಗೆಲುವಿನ ಸಣ್ಣ ಭರವಸೆ ಕರುಣರತ್ನೆ ಬಳಗದಲ್ಲಿ ಮೂಡಿತ್ತು. ಆದರೆ ಶಫೀಕ್’ಗೆ ತಕ್ಕ ಸಾಥ್ ನೀಡಿದ ಆಲ್’ರೌಂಡರ್ ಮುಹಮ್ಮದ್ ನವಾಝ್ 34 ಎಸೆತಗಳನ್ನು ಎದುರಿಸಿ 19 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡರು.

ಪ್ರಭಾತ್ ಜಯಸೂರ್ಯ ಅಪೂರ್ವ ದಾಖಲೆ

ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಪ್ರಭಾತ್ ಜಯಸೂರ್ಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅಪೂರ್ವ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ವೃತ್ತಿ ಜೀವನದ ಎರಡನೇ ಟೆಸ್ಟ್ ಪಂದ್ಯವನ್ನಾಡಿದ ಪ್ರಭಾತ್, ಮೊದಲ ಮೂರು ಇನ್ನಿಂಗ್ಸ್ ನಲ್ಲಿ 5 ವಿಕೆಟ್’ಗಳನ್ನ ಪಡೆದ ದಾಖಲೆ ವೀರರ ಪಟ್ಟಿಯಲ್ಲಿ ಮೂರನೇ ಬೌಲರ್ ಎನಿಸಿದರು. ಇದಕ್ಕೂ ಮೊದಲು ಟಾಮ್ ರಿಚರ್ಡ್’ಸನ್ ಮತ್ತು ಕ್ಲಾರಿ ಗ್ರಿಮ್ಮೆಟ್ ಈ ಸಾಧನೆ ಮಾಡಿದ್ದರು. ಪಾಕಿಸ್ತಾನದ ವಿರುದ್ಧ ಪ್ರಭಾತ್ ಜಯಸೂರ್ಯ ಒಟ್ಟು 9 ವಿಕೆಟ್’ಗಳನ್ನು ಪಡೆಯುವ ಮೂಲಕ ಮಿಂಚಿದರು.ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರು. ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಎಡಗೈ ಸ್ಪಿನ್ನರ್ ಜಯಸೂರ್ಯ, ಎರಡೂ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಬಳಿಸಿದ್ದರು.

Join Whatsapp
Exit mobile version