ಇಸ್ಲಾಮಾಬಾದ್: ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಹಿಂಸಾಚಾರಕ್ಕೆ ಸೇನೆಯೇ ಕ್ಷಮೆಯಾಚಿಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಖಾನ್, ಯಾವುದೇ ಕಾರಣಕ್ಕೂ ತಾನು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮೇ 9ರಂದು ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯದ ಆವರಣದಿಂದ ಸೇನೆಯು ಇಮ್ರಾನ್ ಖಾನ್ ಅವರನ್ನು ಬಂಧಿಸಿತ್ತು.
ಖಾನ್ ಬಂಧನ ವಿರೋಧಿಸಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಬೆಂಬಲಿಗರು ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಮತ್ತು ಗಲಭೆ ನಡೆಸಿದ್ದರು.
ಮೇ 7ರಂದು ಸೇನೆಯ ವಕ್ತಾರ ಮೇಜರ್ ಅಹ್ಮದ್ ಷರೀಫ್, ತನ್ನ ಅರಾಜಕತೆಯ ರಾಜಕೀಯಕ್ಕಾಗಿ ಪಕ್ಷವು ಕ್ಷಮೆಯಾಚಿಸಿದರೆ ಮಾತ್ರ ಅದರೊಂದಿಗೆ ಯಾವುದೇ ಮಾತುಕತೆ ನಡೆಸಬಹುದು ಎಂದು ಹೇಳಿದ್ದರು. ಹಿಂಸಾಚಾರಕ್ಕಾಗಿ ಇಮ್ರಾನ್ ಖಾನ್ ಕ್ಷಮೆಯಾಚಿಸಬೇಕು ಎಂದು ಹಲವು ವಲಯಗಳಿಂದ ಕರೆ ಬಂದಿತ್ತು.