ಪಾಕಿಸ್ತಾನ: ಬಲೂಚಿಸ್ತಾನದಲ್ಲಿ 23 ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಬಸ್ ನಿಲ್ಲಿಸಿ ಗುರುತಿನ ಚೀಟಿ ತಪಾಸಣೆ ನೆಪದಲ್ಲಿ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿದ ಬಂದೂಕುಧಾರಿಗಳು 23 ಪ್ರಯಾಣಿಕರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದಾರೆ. ಬಲೂಚಿಸ್ತಾನದ ಮುಸಖೇಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಈ ಎರಡು ಪ್ರಾಂತ್ಯಗಳ ನಡುವಿನ ಹೆದ್ದಾರಿಯಲ್ಲಿ ಬಸ್ ಗಳನ್ನು ಅಡ್ಡಗಟ್ಟಿದ ಬಂದೂಕುಧಾರಿಗಳು ಪ್ರಯಾಣಿಕರನ್ನು ಇಳಿಸಿ ಒಬ್ಬೊಬ್ಬರಿಗೆ ಗುಂಡಿಕ್ಕಿದ್ದಾರೆ ಎಂದು ಎಸಿ ಮುಸಾಖೈಲ್ ನಜೀಬ್ ಕಕ್ಕರ್ ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಮೃತರೆಲ್ಲರೂ ಪಂಜಾಬ್ ಪ್ರಾಂತ್ಯಕ್ಕೆ ಸೇರಿದವರಾಗಿದ್ದು, ಘಟನೆ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಅಲ್ಲದೆ, ಶಸ್ತ್ರಸಜ್ಜಿತರ ಗುಂಪು 10 ವಾಹನಗಳಿಗೂ ಬೆಂಕಿ ಹಚ್ಚಿದೆ.
ಈ ಭಯೋತ್ಪಾದಕ ಕೃತ್ಯವನ್ನು ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫರಾಜ್ ಬುಗ್ಟಿ ತೀವ್ರವಾಗಿ ಖಂಡಿಸಿದ್ದಾರೆ.