ಬೆಂಗಳೂರು: ಪ್ರಿಯತಮೆಯ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದ ಪಾಗಲ್ ಪ್ರೇಮಿಯನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
ಪಾಗಲ್ ಪ್ರೇಮಿ ವಿಕ್ರಮ್ ಬಂಧಿತ ಆರೋಪಿ. ತಾನು ಪ್ರೀತಿಸಿದ ಯುವತಿಯ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗುವ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಹಲಸೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಹಿಂದೆ ಡ್ರಗ್ಸ್ ಕೇಸ್’ನಲ್ಲಿ ಸಿಕ್ಕಿ ಬಿದ್ದಿದ್ದ ವಿಕ್ರಮ್ ಕೆಲವು ತಿಂಗಳು ಜೈಲು ಪಾಲಾಗಿದ್ದು ಜಾಮೀನಿನ ಮೇಲೆ ಹೊರಬಂದಿದ್ದ ಆತ ಮತ್ತೆ ಜೈಲು ಸೇರಿದ್ದಾನೆ.
ಬಿಟಿಎಂ ಲೇಔಟ್, ಮಡವಾಳ, ಕೊರಮಂಗಲ ಕಡೆಗಳಲ್ಲಿ ಡ್ರಗ್ ಪೆಡ್ಲಿಂಗ್ ಮಾಡಿಕೊಂಡಿದ್ದ ಆರೋಪಿ ವಿಕ್ರಮ್ ಕಳೆದ 3 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು.
ಇತ್ತೀಚಿಗೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್’ನಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ. ಡ್ರಗ್ಸ್ ಪ್ರಕರಣದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ ವಿಕ್ರಮ್’ಗೆ ಜೈಲಿನಿಂದ ಬಿಡುಗಡೆಯಾದ ನಂತರ ತಾನು ಪ್ರೀತಿಸುತ್ತಿದ್ದ ಯುವತಿ ಮೇಲೆ ಅನುಮಾನ ಹುಟ್ಟಿಕೊಂಡಿದೆ.
ತಾನು ಪ್ರೀತಿಸುತ್ತಿದ್ದ ಯುವತಿಯೇ ಡ್ರಗ್ ಪೆಡ್ಲಿಂಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಅನುಮಾನಿಸಿದ ವಿಕ್ರಮ್ ಈ ಕೃತ್ಯ ಎಸಗಿದ್ದಾನೆ. ಜೈಲಿನಿಂದ ಹೊರಗಡೆ ಬಂದ ವಿಕ್ರಮ್ ಪ್ರೇಯಸಿಯ ಬೈಕ್ ಸುಟ್ಟು ಹಾಕಿ ಪರಾರಿಯಾಗುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದ ಹಲಸೂರು ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ ವಿಕ್ರಮ್’ನನ್ನು ಬಂಧಿಸಿದ್ದಾರೆ.