ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಡಾ. ಜಾಕಿರ್ ಹುಸೇನ್ ಎನ್ಎಂಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಿಂದ 22 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಆಸ್ಪತ್ರೆಯಲ್ಲಿದ್ದ ಒಟ್ಟು 150 ರೋಗಿಗಳ ಪೈಕಿ 127 ಮಂದಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಉಳಿದ ರೋಗಿಗಳು ವೆಂಟಿಲೇಟರ್ ಸಹಾಯದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
“ನಮಗೆ ಮುಂಜಾನೆ 12.30ಕ್ಕೆ ಟ್ಯಾಂಕ್ʼನಿಂದ ಆಮ್ಲಜನಕ ಸೋರಿಕೆಯಾಗುತ್ತಿರುವ ಬಗ್ಗೆ ಕರೆ ಬಂತು. ತಕ್ಷಣ ನಾವು ಸ್ಥಳಕ್ಕೆ ಆಗಮಿಸಿ ತೆರೆದಿದ್ದ ಕವಾಟವನ್ನು ಮುಚ್ಚಿದ್ದೇವೆ. ಸಾಕಷ್ಟು ಆಮ್ಲಜನಕ ಸೋರಿಕೆಯಾಗಿದೆ” ಎಂದು ಘಟನೆ ಕುರಿತು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ. ರಾಜೇಂದ್ರ ಶಿಂಘನೆ, ‘ಇದೊಂದು ದುರದೃಷ್ಟಕರ ಘಟನೆ. ಸಂಪೂರ್ಣ ವರದಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದು, ವಿಚಾರಣೆಗೆ ಆದೇಶ ನೀಡಿದ್ದೇವೆ. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ’ ಎಂದಿದ್ದಾರೆ.