Home ಟಾಪ್ ಸುದ್ದಿಗಳು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ: 14,000 ಕ್ಕೂ ಅಧಿಕ ಸಂತ್ರಸ್ತೆಯರ...

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ: 14,000 ಕ್ಕೂ ಅಧಿಕ ಸಂತ್ರಸ್ತೆಯರ ರಕ್ಷಣೆ

ಹೈದರಾಬಾದ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಘಟಿತವಾದ ಬೃಹತ್‌ ಜಾಲವೊಂದನ್ನು ಸೈಬರಾಬಾದ್‌ ಪೊಲೀಸರು ಭೇದಿಸಿದ್ದಾರೆ.

ಕರ್ನಾಟಕ, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿರುವ ಪೊಲೀಸರು 14,190 ಸಂತ್ರಸ್ತೆಯರನ್ನು ರಕ್ಷಿಸಿದ್ದು, 17 ಮಂದಿಯನ್ನು ಬಂಧಿಸಿದ್ದಾರೆ.

ಈ ಜಾಲವು ಎಂಡಿಎಂಎ ಎನ್ನುವ ಮಾದಕವಸ್ತುವಿನ ಬಳಕೆ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಮಾನವಕಳ್ಳ ಸಾಗಣೆ ತಡೆ ಕಾಯ್ದೆ 1956ರ ಅನ್ವಯ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 34 ಮೊಬೈಲ್, ಮೂರು ಕಾರುಗಳು, ಒಂದು ಲ್ಯಾಪ್ಟಾಪ್ ಹಾಗೂ 2.5 ಗ್ರಾಂ ಎಂಡಿಎಂಎ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ.

17 ಮಂದಿ ಬಂಧಿತರಲ್ಲಿ, ಮೊಹಮ್ಮದ್ ಅದೀಮ್, ಮೊಹಮ್ಮದ್ ಸಮೀರ್, ಹರ್ಬಿಂದರ್ ಕೌರ್, ಮೊಹಮ್ಮದ್ ಸಲ್ಮಾನ್ ಖಾನ್, ಮೊಹಮ್ಮದ್ ಅಬ್ದುಲ್ ಕರೀಮ್, ಎರಸಾಗಿ ಯೋಗೇಶ್ವರ್ ರಾವ್ ಸೇರಿದ್ದಾರೆ. ಕೆಲವು ವಾರಗಳ ಹಿಂದೆ ಪೊಲೀಸರು ಈ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು. ಇವರೊಂದಿಗೆ ಹೈದರಾಬಾದ್ನ ಪ್ರಖ್ಯಾತ ಹೋಟೆಲ್ವೊಂದರ ಮ್ಯಾನೇಜರ್ ರಮೇಶ್ ಎಂಬುವವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತರ ಮೇಲೆ ವೇಶ್ಯಾವಾಟಿಕೆ ನಡೆಸಿದ ಆರೋಪದ ಹಲವು ಪ್ರಕರಣಗಳು ಈಗಾಗಲೇ ಇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಗಳು ಹಲವು ಪ್ರಮುಖ ನಗರಗಳಲ್ಲಿ ಕಾಲ್‌ ಸೆಂಟರ್‌ಗಳನ್ನು ನಿರ್ವಹಿಸುತ್ತಿದ್ದರು. ಇವರ ಪ್ರಮುಖ ಸಂಪರ್ಕ ಜಾಲ ವಾಟ್ಸ್ಯಾಪ್ ನಲ್ಲಿತ್ತು. ವಿಲಾಸಿ ಲೈಫ್‌ಸ್ಟೈಲ್‌, ಐಷಾರಾಮಿ ಜೀವನ, ಸುಲಭ ಹಣದ ಆಸೆ ತೋರಿಸಿ ಸಾವಿರಾರು ಹೆಣ್ಣು ಮಕ್ಕಳನ್ನು ಈ ದಂಧೆಗೆ ಸೆಳೆಯಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

ಆರೋಪಿಗಳು ವೆಬ್‌ಸೈಟ್‌ಗಳ ಮೂಲಕ ಜಾಹೀರಾತು ನೀಡುತ್ತಿದ್ದರು. ನಂತರ, ಕಾಲ್‌ ಸೆಂಟರ್‌ಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಲಾಗುತ್ತಿತ್ತು. ವ್ಯವಹಾರ ಕೂಡಿಬಂದರೆ, ಗಿರಾಕಿಗಳನ್ನು ಹಾಗೂ ಸಂತ್ರಸ್ತೆಯರನ್ನು ಜಾಲನಡೆಸುತ್ತಿದ್ದವರು ಹೋಟೆಲ್‌ ಕೊಠಡಿ ಗಳಿಗೆ ಕರೆದೊಯ್ಯುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಸಂತ್ರಸ್ತೆಯರು ಹೋಟೆಲ್‌ ತಲುಪಿದ ಮೇಲೆ, ಜಾಲ ನಡೆಸುತ್ತಿದ್ದವರು ಎಲ್ಲಾ ವೆಬ್‌ಸೈಟ್‌, ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಸಂತ್ರಸ್ತೆಯರ ಫೋಟೊಗಳನ್ನು ಹಾಕುತ್ತಿದ್ದರು. ಜಾಹೀರಾತುಗಳನ್ನೂ ನೀಡಲಾಗುತ್ತಿತ್ತು. ಜಾಹೀರಾತು ನೋಡಿದ ಗಿರಾಕಿಗಳು ವಾಟ್ಸ್‌ಆ್ಯಪ್‌ ಸಂಖ್ಯೆಗೆ ಸಂದೇಶ ಕಳುಹಿಸುತ್ತಿದ್ದರು. ನಂತರ, ಕಾಲ್ ಸೆಂಟರ್‌ ವ್ಯಕ್ತಿಯು ಈ ಗಿರಾಕಿಗಳಿಗೆ ಕರೆ ಮಾಡುತ್ತಿದ್ದರು ಮತ್ತು ಹೋಟೆಲ್‌ಗಳ ವಿಳಾಸವನ್ನು ನೀಡುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಈ ಜಾಲದಲ್ಲಿ ಸಿಲುಕಿಕೊಂಡ ಶೇ 50ರಷ್ಟು ಸಂತ್ರಸ್ತೆಯರು ಪಶ್ಚಿಮ ಬಂಗಾಳದವರು. ಶೇ 20ರಷ್ಟು ಕರ್ನಾಟಕ, ಶೇ 15ರಷ್ಟು ಮಹಾರಾಷ್ಟ್ರ ಹಾಗೂ ಶೇ 7ರಷ್ಟು ದೆಹಲಿಯವರಾಗಿದ್ದಾರೆ. ಭಾರತದವರಲ್ಲದೆ, ಶೇ 3ರಷ್ಟು ಸಂತ್ರಸ್ತೆಯರು ಬಾಂಗ್ಲಾದೇಶ, ನೇಪಾಳ, ಥಾಯ್ಲೆಂಡ್‌, ಉಜ್ಬೆಕಿಸ್ತಾನ್‌, ರಷ್ಯಾಕ್ಕೆ ಸೇರಿದವರಾಗಿದ್ದಾರೆ’ ಎಂದು ಸೈಬರಾಬಾದ್‌ ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version