9 ಮಕ್ಕಳಿದ್ದರೂ 85ನೇ ಇಳಿ ವಯಸ್ಸಿನಲ್ಲಿ ‘ಅನಾಥೆ’ಯಾದ ತಾಯಿ !

Prasthutha|

ಮಂಗಳೂರು: ತಮ್ಮ ಜೀವನದ ಅಮೂಲ್ಯ ಸಮಯವನ್ನೆಲ್ಲಾ ತನ್ನ ಮಕ್ಕಳ ಒಳಿತಿಗಾಗಿ ವಿನಿಯೋಗಿಸಿದ ತಾಯಿಯನ್ನು, ಸೊಸೆಯಂದಿರ ಹಾಗೂ ಅಳಿಯಂದಿರ ಮಾತು ಕೇಳಿ, ಮಕ್ಕಳು ಮನೆಯಿಂದಲೇ ದೂರವಿಟ್ಟಿರುವ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

- Advertisement -

85 ವಯಸ್ಸಿನ ಸುಬ್ಬಲಕ್ಷ್ಮಿ ಅವರಿಗೆ ತನ್ನ ಇಳಿ ವಯಸ್ಸಿನಲ್ಲಿ ಗಂಡು ಮಕ್ಕಳ ಮನೆಯಲ್ಲಿ ಉಳಿಯಬೇಕು ಎಂಬ ಬಯಕೆ. ಆದರೆ ಐವರು ಗಂಡು ಮಕ್ಕಳಲ್ಲಿ ನಾಲ್ವರು ಕುಟುಂಬ ಸಮೇತ ಸಂತೋಷವಾಗಿದ್ದರೂ ಸ್ವಂತ ಹೆತ್ತ ತಾಯಿ ಮಾತ್ರ ಅವರ ಪಾಲಿಗೆ ಭಾರವಾಗಿದ್ದಾರೆ.

ಸಹಾಯಕ್ಕಾಗಿ ಪಾಂಡೇಶ್ವರ ಠಾಣೆಯ ಹಿರಿಯ ನಾಗರಿಕರ ಸಹಾಯವಾಣಿಯ ಮೊರೆ ಹೋಗಿದ್ದ ಸುಬ್ಬಲಕ್ಷ್ಮಿ ಅವರ ಕಥೆ ಕೇಳಿ ಅಧಿಕಾರಿಗಳು ಮರುಗಿದ್ದಾರೆ. ತಾಯಿಯನ್ನು ಕರೆದುಕೊಂಡು ಹೋಗುವಂತೆ, ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ಸೊಸೆ, ಪೊಲೀಸರು ಹಾಗೂ ಸಹಾಯವಾಣಿ ಸಿಬ್ಬಂದಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.

- Advertisement -

ಸುಬ್ಬಲಕ್ಷ್ಮಿ ಅವರಿಗೆ 5 ಮಂದಿ ಪುತ್ರರು ಹಾಗೂ 5 ಮಂದಿ ಪುತ್ರಿಯರು. ಓರ್ವ ಮಗ ಮೃತಪಟ್ಟಿದ್ದಾರೆ. ತಿಂಗಳಿಗೆ ಒಬ್ಬರ ಮನೆಯಲ್ಲಿ ಉಳಿಯಬೇಕು ಎನ್ನುವ ಬಯಕೆ ಈ ತಾಯಿಯದ್ದು.  ತೊಕ್ಕೊಟ್ಟು ಕಾಪಿಕಾಡಿನಲ್ಲಿ ಇರುವ ಪುತ್ರನ ಮನೆಯಲ್ಲಿದ್ದ ಸುಬ್ಬಲಕ್ಷ್ಮಿ ಅವರನ್ನು ಮೂರು ತಿಂಗಳ ಹಿಂದೆಯೆ ದೂರದ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಆದರ ನಂತರ ಯಾರೂ ಕೂಡ ಇಲ್ಲಿಂದ ಕರೆದುಕೊಂಡು ಹೋಗಿಲ್ಲ ಎಂದು 85 ವಯಸ್ಸಿನ ಸುಬ್ಬಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.

ಮಕ್ಕಳಿಗೆ ಬೇಡವಾದರೂ, ತನಗೆ ಮಕ್ಕಳ ಮನೆಯಲ್ಲಿ ಉಳಿಯಲು ಅವಕಾಶ ಕಲ್ಪಿಸಿ ಕೊಡುವಂತೆ ಹಿರಿಯ ನಾಗರಿಕರ ಸಹಾಯವಾಣಿಯ ನೆರವು ಕೋರಿದ್ದಾರೆ ಈ ವೃದ್ಧೆ.

ಅಕ್ಕರೆಯಿಂದ ಪಾಲನೆ ಮಾಡಿದ ಹೆಣ್ಣುಮಕ್ಕಳ ಮನೆಗೆ ಹೋಗುವುದಕ್ಕೆ ಸುಬ್ಬಲಕ್ಷ್ಮೀ ಅವರು ಮನಸ್ಸು ಒಪ್ಪುತ್ತಿಲ್ಲ. ಗಂಡು ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಆಸೆಯ ಕಣ್ಣುಗಳಿಂದ ದಾರಿ ನೋಡುತ್ತಿರುವ ಈ ತಾಯಿಗೆ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂಬತ್ತು ಮಂದಿ ಮಕ್ಕಳಿದ್ದರೂ ಆಶ್ರಯ ಸಿಗದೇ ಸುಬ್ಬಲಕ್ಷ್ಮಿ ‘ಅನಾಥೆ’ಯಾಗಿದ್ದಾರೆ. ನೊಂದು ದಿಕ್ಕು ಕಾಣದೆ ನ್ಯಾಯಕ್ಕಾಗಿ ಹಿರಿಯ ನಾಗರಿಕ ಸಹಾಯವಾಣಿಯ ಮೊರೆ ಹೋಗಿದ್ದಾರೆ.

ಸುಬ್ಬಲಕ್ಷ್ಮಿ ದೂರಿಗೆ ಸ್ಪಂದಿಸಿದ ಠಾಣಾ ನಿರೀಕ್ಷಕಿ ರೇವತಿ, ಸಹಾಯವಾಣಿ ಸಂಯೋಜಕರ ತಂಡದ ಮೂಲಕ ಪುತ್ರರನ್ನು ಸಂಪರ್ಕಿಸಿ ಎರಡು ವಾರಗಳ ಸಮಯ ನೀಡಿದ್ದರು. ಆದರೆ, ಯಾರೂ ಕೂಡ ಹೆತ್ತ ತಾಯಿಯನ್ನು ಕರೆದುಕೊಂಡು ಹೋಗಲು ಮನಸ್ಸು ಮಾಡದ ಹಿನ್ನೆಲೆಯಲ್ಲಿ ಶನಿವಾರ ಸಹಾಯವಾಣಿ ಸಂಯೋಜಕಿ ಎಸ್.ರೇವತಿ , ಕೌನ್ಸಿಲರ್‌ಗಳಾದ ಮಹಿಮಾ, ರಂಜಿನಿ, ಉಷಾ , ಆಶಿತಾ ಅವರು ಪೊಲೀಸರ ಸಹಕಾರದೊಂದಿಗೆ ಸುಬ್ಬಲಕ್ಷ್ಮಿ ಅವರನ್ನು ತೊಕ್ಕೊಟ್ಟು ಕಾಪಿಕಾಡು ಬಳಿ ಮಗನ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಮನೆಗೆ ಬೀಗ ಹಾಕಲಾಗಿತ್ತು.

ನಾಲ್ವರು ಪುತ್ರರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸುವ ತೀರ್ಮಾನಕ್ಕೆ ಅಧಿಕಾರಿಗಳು ಮುಂದಾಗಿದ್ದರೂ ಸಹ ಯಾರೂ ಕರೆದುಕೊಂಡು ಹೋಗದೆ ಇದ್ದಲ್ಲಿ ಕಾನೂನು ರೀತಿ ದೂರು ದಾಖಲಿಸಿ, ಉಪ ವಿಭಾಗಾಧಿಕಾರಿ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp