Home ಟಾಪ್ ಸುದ್ದಿಗಳು ನಮ್ಮ ಭರವಸೆಗಳು ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಮ್ಮ ಭರವಸೆಗಳು ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

►ನಮ್ಮದು ನುಡಿದಂತೆ ನಡೆದ ಸರ್ಕಾರ


ಬೆಂಗಳೂರು: ನಮ್ಮ ಭರವಸೆಗಳು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಕರ್ನಾಟಕ ಬಜೆಟ್ 2023 ಮಂಡನೆ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ 2023-24ರ ಸಾಲಿನ ಬಜೆಟ್ ಮಂಡಿಸಿದ್ದು ಇದರ ಗಾತ್ರ 3,27,747 ಕೋಟಿ ರೂ. ಆಗಿದೆ. ಇದು ಪೂರ್ಣಪ್ರಮಾಣದ ಆಯವ್ಯಯವಾಗಿದೆ ಎಂದರು.


ಗ್ಯಾರಂಟಿ ಈಡೇರಿಸಿದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಅಂತ ಹೇಳುತ್ತಿದ್ದಾರೆ. ಆದರೆ ನಾವು ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆ ಬಜೆಟ್ ನಲ್ಲಿ ನೋಡಿಕೊಂಡಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ನಮ್ಮದು ನುಡಿದಂತೆ ನಡೆದ ಸರ್ಕಾರ. ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಇದಕ್ಕೆ ಬಜೆಟ್ ನಲ್ಲೂ ಹಣ ಒದಗಿಸಿದ್ದೇವೆ ಎಂದರು.


ಸಿಎಂ ಆಗಿದ್ದ ಬೊಮ್ಮಾಯಿ ಅದರಲ್ಲಿ ನಾಲ್ಕು ತಿಂಗಳ ಮಟ್ಟಿಗೆ ಲೇಖಾನುದಾನ ತೆಗೆದುಕೊಂಡಿದ್ದರು. ಚುನಾವಣಾ ಪೂರ್ವದಲ್ಲಿ ಮಂಡಿಸಿದ್ದ ಬಜೆಟ್ ಅದೊಂದು ರೀತಿ ಚುನಾವಣೆ ಬಜೆಟ್ ಅಂತ ಇರಬಹುದು ಎಂದು ಹೇಳಿದ ಸಿದ್ದರಾಮಯ್ಯ, ನಮ್ಮ ಸರ್ಕಾರದ ಮೇಲೆ ಜನರ ನಿರೀಕ್ಷೆಗಳು ಸಾಕಷ್ಟಿವೆ. ಶೆ.90 ರಷ್ಟು ಜನರ ಕೈಲಿ ಹಣ ಇಲ್ಲ ಶೇ.10 ರಷ್ಟು ಜನರ ಕೈಲಿ ಮಾತ್ರ ಹಣ ಇರುತ್ತದೆ. ಬೆಲೆ ಏರಿಕೆ ಹಣದುಬ್ಬರ ನಿರುದ್ಯೋಗದಿಂದ ಜನರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ದುರ್ಬಲ ವರ್ಗದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದೆ ಎಂದರು.

Join Whatsapp
Exit mobile version