Home ಟಾಪ್ ಸುದ್ದಿಗಳು ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ ನೀಡಿದ ರಾಷ್ಟ್ರವು ಉಪದೇಶ ಮಾಡುವ ಅರ್ಹತೆ ಹೊಂದಿಲ್ಲ: ಪಾಕಿಸ್ತಾನವನ್ನು...

ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ ನೀಡಿದ ರಾಷ್ಟ್ರವು ಉಪದೇಶ ಮಾಡುವ ಅರ್ಹತೆ ಹೊಂದಿಲ್ಲ: ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದಕ್ಕೆ ಭಾರತ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.

ಅಲ್-ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ ವಹಿಸಿದ್ದ ಮತ್ತು ನೆರೆಯ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಪದೇಶ ಮಾಡುವ ಅರ್ಹತೆಯನ್ನು ಹೊಂದಿಲ್ಲ ಎಂದು ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.

ಭಯೋತ್ಪಾದನೆ ನಿಗ್ರಹ ಮತ್ತು ಸುಧಾರಿತ ಬಹುಪಕ್ಷೀಯತೆಯ ಕುರಿತಾದ ಎರಡು ಕಾರ್ಯಕ್ರಮಗಳು ಭಾರತದ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆಯುತ್ತಿವೆ.

ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಈ ಕುರಿತಾದ ಚರ್ಚೆ ವೇಳೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯು ನಮ್ಮ ಕಾಲದ ಪ್ರಮುಖ ಸವಾಲುಗಳಾದ ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆ, ಸಂಘರ್ಷಗಳು ಅಥವಾ ಭಯೋತ್ಪಾದನೆಯಂತಹ ಸಮಸ್ಯೆಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ಎಸ್ ಜೈಶಂಕರ್ ಹೇಳಿದರು.

ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ಕುರಿತು ಚರ್ಚೆಗಳನ್ನು ನಡೆಸುತ್ತಿರುವಾಗ ಇಂತಹ ಮಾತುಗಳು ಬರಬಾರದು. ಜಗತ್ತು ಯಾವುದನ್ನು ಸ್ವೀಕಾರಾರ್ಹವಲ್ಲವೆಂದು ಪರಿಗಣಿಸುತ್ತದೆಯೋ ಅದನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೂ ಉದ್ಭವಿಸಬಾರದು. ಒಸಾಮಾ ಬಿನ್ ಲಾಡೆನ್ ಗೆ ಆತಿಥ್ಯ ನೀಡಿದ್ದ  ಮತ್ತು ನೆರೆಯ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ದೇಶವು ಈ ಮಂಡಳಿಯ ಮುಂದೆ ಧರ್ಮೋಪದೇಶ ಮಾಡುವ ಅರ್ಹತೆಯನ್ನು ಹೊಂದಿಲ್ಲ ಎಂದು ಅವರು ಪಾಕಿಸ್ತಾನದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದರು.

Join Whatsapp
Exit mobile version