Home ಟಾಪ್ ಸುದ್ದಿಗಳು ಆಳುವ ಪಕ್ಷದ ಅಜೆಂಡಾ ಜಾರಿಗಾಗಿ ಸಿಬಿಐ, ಇಡಿ ನಿರ್ದೇಶಕರ ಕಾರ್ಯಾವಧಿ ಕುರಿತ ಸುಗ್ರೀವಾಜ್ಞೆ: ಸಿಪಿಐ(ಎಂ)

ಆಳುವ ಪಕ್ಷದ ಅಜೆಂಡಾ ಜಾರಿಗಾಗಿ ಸಿಬಿಐ, ಇಡಿ ನಿರ್ದೇಶಕರ ಕಾರ್ಯಾವಧಿ ಕುರಿತ ಸುಗ್ರೀವಾಜ್ಞೆ: ಸಿಪಿಐ(ಎಂ)

ನವದೆಹಲಿ : ಸಿ.ಬಿ.ಐ. ಮತ್ತು ಇ.ಡಿ. ನಿರ್ದೇಶಕರ ಅಧಿಕಾರಾವಧಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದನ್ನು ಸಿಪಿಐಎಂ ಪಾಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.


ಸಿ.ಬಿ.ಐ. ಮತ್ತು ಇ.ಡಿ ಎರಡೂ ಆಡಳಿತ ಪಕ್ಷದ ಕಾರ್ಯಸೂಚಿಯನ್ನು ಮುನ್ನಡೆಸಲು ಅದರ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿಪಕ್ಷಗಳ ನಾಯಕರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಈ ಏಜೆನ್ಸಿಗಳ ಸ್ವಾಯತ್ತತೆಯನ್ನು ಮತ್ತಷ್ಟು ಬುಡಮೇಲು ಮಾಡಲು ಮತ್ತು ಪ್ರಮುಖ ಅಧಿಕಾರಿಗಳನ್ನು ಆಳುವವರಿಗೆ ಹೆಚ್ಚು ವಿಧೇಯರನ್ನಾಗಿ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದಿರುವ ಸಿಪಿಐಎಂ ನವೆಂಬರ್ 29 ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಕೆಲವೇ ದಿನಗಳ ಮೊದಲು ಈ ಸುಗ್ರೀವಾಜ್ಞೆಗಳನ್ನು ಪ್ರಕಟಿಸಿರುವುದು ಖಂಡನೀಯ. ಬಿಜೆಪಿ ಮತ್ತೆ-ಮತ್ತೆ “ಸುಗ್ರೀವಾಜ್ಞೆ ರಾಜ್ಯಭಾರ’ಕೆ ಇಳಿಯುತ್ತಿರುವುದು ಪ್ರಜಾಪ್ರಭುತ್ವ-ವಿರೋಧಿಯಾಗಿದೆ ಎಂದು ಟೀಕಿಸಿದೆ.


ಈ ಸುಗ್ರೀವಾಜ್ಞೆಗಳು, ಯಾವುದೇ ಅಧಿಕಾರಾವಧಿಯ ವಿಸ್ತರಣೆಯು ಚಾಲ್ತಿಯಲ್ಲಿರುವ ತನಿಖೆಗೆ ಅನುಕೂಲವಾಗುವಂತೆ ಅಲ್ಪಾವಧಿಗೆ ಮತ್ತು “ಅಪರೂಪದ ಮತ್ತು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ” ಇರಬೇಕು ಎಂದು ವಿಧಿಸಿರುವ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಬದಿಗೊತ್ತುವ ಗುರಿಯನ್ನು ಸಹ ಹೊಂದಿವೆ.. ಈ ಸುಗ್ರೀವಾಜ್ಞೆಗಳೊಂದಿಗೆ ಕೇಂದ್ರ ಸರ್ಕಾರವು ಈಗ ಮೂರು ಒಂದು-ವರ್ಷದ ವಿಸ್ತರಣೆಯನ್ನು ನೀಡಬಹುದು. ಈ ಸುಗ್ರೀವಾಜ್ಞೆಗಳನ್ನು ಹಿಂಪಡೆದುಕೊಳ್ಳಬೇಕು. ಸಂಸತ್ತಿನಲ್ಲಿ ಈ ಸುಗ್ರೀವಾಜ್ಞೆಗಳನ್ನು ಕಾನೂನಾಗಿ ಪರಿವರ್ತಿಸುವ ಕ್ರಮವನ್ನು ಸಿಪಿಐಎಂ ಸಂಸದರು ವಿರೋಧಿಸಲಿದ್ದಾರೆ ಎಂದು ಎಂದು ಸಿಪಿಐಎಂ ಪಾಲಿಟ್ ಬ್ಯೂರೋ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp
Exit mobile version