ಲಖನೌ : “ಮದುವೆಯ ಉದ್ದೇಶಕ್ಕಾಗಿ ಮಾತ್ರ ಆಗುವ ಮತಾಂತರ ಸ್ವೀಕಾರಾರ್ಹವಲ್ಲ” ಎಂದು ಆದೇಶಿಸಲಾದ ಈ ಹಿಂದಿನ ಅಂತರ್ ಧರ್ಮೀಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪುಗಳು, ಒಳ್ಳೆಯ ಕಾನೂನಾಗಿರಲಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯನ್ನು ಅಪಹರಿಸಿ, ಮದುವೆಯಾಗಿದ್ದಾರೆಂದು ದೂರಿದ ಎಫ್ ಐಆರ್ ಒಂದನ್ನು ರದ್ದುಪಡಿಸಿ ಆದೇಶಿಸಿದ ಸಂದರ್ಭ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಿಂದಿನ ತೀರ್ಪಿನ ಕುರಿತು ಪ್ರಸ್ತಾಪಿಸಿದ ನ್ಯಾ. ಪಂಕಜ್ ನಕ್ವಿ ಮತ್ತು ವಿವೇಕ್ ಅಗರ್ವಾಲ್, “ಈ ಯಾವುದೇ ತೀರ್ಪುಗಳು, ಇಬ್ಬರು ಪ್ರಬುದ್ಧ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ತಾವು ಯಾರೊಂದಿಗೆ ಜೀವಿಸಬೇಕೆಂಬ ಆಯ್ಕೆಯ ಸ್ವಾತಂತ್ರ್ಯದ ಅವರ ಹಕ್ಕನ್ನು ಉದ್ದೇಶಿಸಿದ್ದುದಾಗಿರಲಿಲ್ಲ. ನೂರ್ ಜಹಾನ್ ಮತ್ತು ಪ್ರಿಯಾಂಶಿ ಪ್ರಕರಣದ ತೀರ್ಪುಗಳು ಒಳ್ಳೆಯ ಕಾನೂನುಗಳಾಗಿರಲಿಲ್ಲ ಎಂದು ನಾವು ಅಭಿಪ್ರಾಯ ಪಡುತ್ತಿದ್ದೇವೆ’’ ಎಂದಿದ್ದಾರೆ.
ಮದುವೆ ಅಥವಾ ಮತಾಂತರದ ಮಾನ್ಯತೆಯ ಬಗ್ಗೆ ನಾವು ಹೇಳಿಕೆ ಕೊಟ್ಟಿರಲಿಲ್ಲ ಎಂಬುದನ್ನು ಈ ಅರ್ಜಿಯ ಇತ್ಯರ್ಥದ ಸಂದರ್ಭ ನಾವು ಸ್ಪಷ್ಟಪಡಿಸುತ್ತಿದ್ದೇವೆ ಎಂದು ನ್ಯಾಯಪೀಠ ಸ್ಪಷ್ಟನೆ ನೀಡಿದೆ.
ಈ ಹಿಂದಿನ ಪ್ರಕರಣದಲ್ಲಿ ವಿವಾಹವಾಗುವ ಒಂದೇ ಉದ್ದೇಶದಿಂದ ಮತಾಂತರ ಸಲ್ಲದು ಎಂಬ ತೀರ್ಪನ್ನು ಆಧಾರವಾಗಿಟ್ಟುಕೊಂಡು, ಬಿಜೆಪಿ ಆಡಳಿತದ ರಾಜ್ಯಗಳು ‘ಲವ್ ಜಿಹಾದ್’ ವಿರುದ್ಧ ಕಾನೂನು ತರುವ ಬಗ್ಗೆ ಮಾತನಾಡುತ್ತಿವೆ. ‘ಲವ್ ಜಿಹಾದ್’ ಕುರಿತಂತೆ ಹಲವು ವರ್ಷಗಳಿಂದ ಕಟ್ಟುಕತೆಗಳನ್ನು ಹೆಣೆದುಕೊಂಡು ಬಂದಿದ್ದ ಬಿಜೆಪಿ ಸಹ ಸಂಘಟನೆಗಳು ಅದಕ್ಕೆ ತಕ್ಕಂತೆ ಒತ್ತಾಯ ಆರಂಭಿಸಿವೆ.