Home ಟಾಪ್ ಸುದ್ದಿಗಳು ಮುಖ್ಯಮಂತ್ರಿಗಳಿಗೆ ರಾಜಕೀಯ ಬದ್ಧತೆ ಇದ್ದರೆ ಹಗರಣಗಳ ಬಗ್ಗೆ ತನಿಖೆಗೆ ಆದೇಶಿಸಲಿ: ಡಿ ಕೆ ಶಿವಕುಮಾರ್

ಮುಖ್ಯಮಂತ್ರಿಗಳಿಗೆ ರಾಜಕೀಯ ಬದ್ಧತೆ ಇದ್ದರೆ ಹಗರಣಗಳ ಬಗ್ಗೆ ತನಿಖೆಗೆ ಆದೇಶಿಸಲಿ: ಡಿ ಕೆ ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿಗಳಿಗೆ ಅವರ ಪಕ್ಷದ ಗೌರವ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಅವರಿಗೆ ರಾಜಕೀಯ ಬದ್ಧತೆ ಇದ್ದರೆ ರಾಜ್ಯದಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ, ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ಹಣ ನೀಡಬೇಕು ಎಂದು ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಜನತೆಗೆ ತಿಳಿಸಿದ್ದಾರೆ.ಇಡೀ ದೇಶವೇ ತಲ್ಲಣಗೊಳ್ಳುವ ಈ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದು, ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ಪ್ರಕರಣವನ್ನು ಕೇವಲ ಎಸಿಬಿ ಮಾತ್ರವಲ್ಲ, ಕೇಂದ್ರದ ತನಿಖಾ ಸಂಸ್ಥೆಗಳೂ ತನಿಖೆ ಮಾಡಬೇಕು ಒತ್ತಾಯಿಸಿದರು.

ಈ ಸರ್ಕಾರ ಹುಟ್ಟಿದ್ದೇ ಶಾಸಕರನ್ನು ಖರೀದಿ ಮಾಡಿ. ಶಾಸಕ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಸಚಿವ ಅಶ್ವಥ್ ನಾರಾಯಣ ಹಾಗೂ ಯೋಗೀಶ್ವರ್ ಅವರು 30 ಕೋಟಿ ಹಣ ನೀಡುವುದಾಗಿ ಹೇಳಿ 5 ಕೋಟಿ ಮುಂಗಡ ಕೊಟ್ಟು ಹೋಗಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಬಿ.ಸಿ. ಪಾಟೀಲ್ ಮತ್ತಿತರ ನಾಯಕರುಗಳು ಆಮಿಷ ಒಡ್ಡಿರುವ ಸಂಭಾಷಣೆ ಗಮನಿಸಿದ್ದೇವೆ. ಹೆಬ್ಬಾರ್, ರಹೀಂ ಖಾನ್ ಅವರು ಈ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು. ಅಂತಿಮವಾಗಿ ಬಿಜೆಪಿಯವರು ಆಪರೇಷನ್ ಕಮಲದಲ್ಲಿ ಯಶಸ್ವಿಯಾಗಿ ಈ ಸರ್ಕಾರವನ್ನು ರಚಿಸಿದ್ದಾರೆ ಎಂದು ಲೇವಡಿ ಮಾಡಿದರು.

ಈಗ ಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ದರ ನಿಗದಿ ಆಗಿರುವುದರ ಬಗ್ಗೆ ಬಿಜೆಪಿ ಶಾಸಕರು ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರ ವಿರುದ್ಧ ವಿಶ್ವನಾಥ್ ಅವರು ಕೊಟ್ಟ ಹೇಳಿಕೆ ಬಗ್ಗೆ ಯಾವುದೇ ಚರ್ಚೆ ಮಾಡಲಿಲ್ಲ, ತನಿಖೆಯನ್ನೂ ನಡೆಸಿಲ್ಲ. ಇನ್ನು ಯತ್ನಾಳ್ ಅವರು ಕರ್ನಾಟಕ ಲೋಕಸೇವಾ ಆಯೋಗ ಸದಸ್ಯರಾಗಲು ಹಾಗೂ ಅಧ್ಯಕ್ಷರಾಗಲು ಕೋಟ್ಯಂತರ ರೂಪಾಯಿ ಹಣ ನೀಡಬೇಕು ಎಂದು ಹೇಳಿದ್ದಾರೆ. ಅದರ ಬಗ್ಗೆಯೂ ಸರ್ಕಾರ ಮಾತನಾಡಲಿಲ್ಲ. ಹೀಗೆ ಪ್ರತಿ ವಿಚಾರದಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿರುವಾಗ ಸರ್ಕಾರ ತನಿಖೆ ನಡೆಸದೆ ಸುಮ್ಮನೆ ಕೂತಿರುವುದು ಏಕೆ? ಎಂದು ಪ್ರಶ್ನಿಸಿದರು.

ಎಲ್ಲ ಅಕ್ರಮಗಳನ್ನು ಮುಖ್ಯಮಂತ್ರಿಗಳು ರಕ್ಷಣೆ ಮಾಡುತ್ತಿದ್ದಾರೋ ಅಥವಾ ಅವರ ಪಕ್ಷದವರು ರಕ್ಷಣೆ ಮಾಡುತ್ತಿದ್ದಾರೋ? ಆ ಮೂಲಕ ಸಂವಿಧಾನವನ್ನು ಸುಡಲು ನಿರ್ಧರಿಸಿದ್ದಾರೋ? ಎಲ್ಲಾ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು. ಕೇಂದ್ರದ ತನಿಖಾ ಸಂಸ್ಥೆಗಳು 24 ಗಂಟೆಗಳಲ್ಲಿ ಯತ್ನಾಳ್ ಅವರನ್ನು ವಶಕ್ಕೆ ಪಡೆದು ಯಾರು ಅವರ ಬಳಿ ಬಂದು ಲಂಚ ಕೇಳಿದ್ದರು ಎಂಬ ಮಾಹಿತಿ ಪಡೆದು, ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

Join Whatsapp
Exit mobile version