Home ಟಾಪ್ ಸುದ್ದಿಗಳು ‘ಇದು ದೇಶದ ಧ್ವನಿಯ ಪರವಾದ ಹೋರಾಟ’ : 26 ಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು...

‘ಇದು ದೇಶದ ಧ್ವನಿಯ ಪರವಾದ ಹೋರಾಟ’ : 26 ಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಹೇಳಿದ್ದೇನು?

ಬೆಂಗಳೂರು: ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲಿರುವ 26 ವಿರೋಧ ಪಕ್ಷಗಳ ಮೈತ್ರಿಯನ್ನು ‘‘ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈನ್ಸ್ (INDIA / Indian National Developmental Inclusive Alliance)  ಎಂದು ಕರೆಯಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಘೋಷಿಸಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ಪ್ರಮುಖ ನಾಯಕರ ಹೇಳಿಕೆಗಳು ಕೆಳಗಿನಂತಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:

ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು, ಜನರ ಹಿತ ಕಾಪಾಡಲು ಇದೊಂದು ಮಹತ್ವದ ಸಭೆಯಾಗಿತ್ತು. ಈ ಸಭೆಯಲ್ಲಿ 26 ಪಕ್ಷಗಳ ನಾಯಕರು ಭಾಗವಹಿಸಿ ಒಮ್ಮತದಿಂದ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ನಾವು ಯುಪಿಎ ಎಂದು ಮೈತ್ರಿ ಮಾಡಿಕೊಳ್ಳಲಾಗಿತ್ತು. ಈಗ ಈ ಮೈತ್ರಿಗೆ INDIA (Indian National Developmental Inclusive Alliance) ಎಂದು ಹೆಸರಿಡಲಾಗಿದೆ.

11 ಸದಸ್ಯರ ಸಮನ್ವಯ ಸಮಿತಿ ರಚಿಸಲಾಗುವುದು. ಈ ಸಮಿತಿಯನ್ನು ಶೀಘ್ರದಲ್ಲೇ ಮಹರಾಷ್ಟ್ರದ ಮುಂಬೈನಲ್ಲಿ ಭೇಟಿ ಮಾಡಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಈ ಸಭೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಪ್ರಚಾರ ನಿರ್ವಹಣೆ ಹಾಗೂ ಇತರೆ ಸಮಿತಿಗಳ ನಿರ್ವಹಣೆಗೆ ಕಾರ್ಯದರ್ಶಿ ನೇಮಕ ಮಾಡಲಾಗುವುದು. ಇದನ್ನು ದೆಹಲಿಯಲ್ಲಿ ಸ್ಥಾಪಿಸಲಾಗುವುದು.

ಇಂದಿನ ಸಭೆಯಲ್ಲಿ ಅತ್ಯುತ್ತಮ ಸಲಹೆ ನೀಡಲಾಗಿದೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಮುಂದಾಗಿದ್ದು, ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ. ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇಡಿ ಸೇರಿದಂತೆ ಇತರೆ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಸೇರಿದ್ದೇವೆ.

ಈ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ರಾಜಕೀಯವಾಗಿ ಭಿನ್ನಾಭಿಪ್ರಾಯವಿದ್ದರು. ದೇಶವನ್ನು ರಕ್ಷಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಒಂದಾಗುತ್ತಿವೆ. ಈ ನಿಟ್ಟಿನಲ್ಲಿ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ.

ಮೊದಲ ಸಭೆ ಪಾಟ್ನಾದಲ್ಲಿ 15 ಪಕ್ಷಗಳು ಸೇರಿದ್ದು, ಇಂದಿನ ಸಭೆಯಲ್ಲಿ 26 ಪಕ್ಷಗಳು ಸೇರಿದ್ದವು. ನಮ್ಮ ಸಭೆ ಬಳಿಕ ಮೋದಿ ಅವರು ಎನ್ ಡಿಎ ಮೈತ್ರಿಕೂಟದ ಸಭೆ ಮಾಡಿದ್ದು, 30 ಪಕ್ಷಗಳ ಸಭೆ ಕರೆದಿದ್ದಾರೆ. ನಮ್ಮ ದೇಶದಲ್ಲಿ ಇಷ್ಟು ಪಕ್ಷಗಳಿವೆ ಎಂದು ಗೊತ್ತಿಲ್ಲ. ಅವುಗಳಲ್ಲಿ ಎಷ್ಟು ಪಕ್ಷಗಳು ಚುನಾವಣೆ ಆಯೋಗದಲ್ಲಿ ನೋಂದಣಿಯಾಗಿವೆ ಗೊತ್ತಿಲ್ಲ.

ಇಷ್ಟು ದಿನ ಬಿಜೆಪಿಯವರು ತಮ್ಮ ಮೈತ್ರಿ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈಗ ವಿರೋಧ ಪಕ್ಷಗಳ ಒಗ್ಗಟ್ಟು ನೋಡಿ ಹೆದರಿದ್ದಾರೆ. ಇಲ್ಲಿ ಸೇರಿರುವ ನಾಯಕರು ಯಾವುದೋ ಅಧಿಕಾರದ ಆಸೆಗೆ ಸೇರಿಲ್ಲ. ದೇಶದ ಜನರ ಸಮಸ್ಯೆಗೆ ಪರಿಹಾರ ನೀಡಿ, ದೇಶದ ಹಿತಕಾಯಲು ಹೋರಾಟ ಮಾಡುವ ಉದ್ದೇಶದೊಂದಿಗೆ ಸೇರಿವೆ. ನಾವು ದೇಶದ ಜನರ ಸಮಸ್ಯೆಗಳನ್ನು ಒಂದೊಂದಾಗಿ ತೆಗೆದುಕೊಂಡು ಎಲ್ಲಾ ರಾಜ್ಯಗಳಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ.

ದೇಶದ ಬಹುತೇಕ ಮಾಧ್ಯಮಗಳನ್ನು ಮೋದಿ ಅವರ ನಿಯಂತ್ರಣದಲ್ಲಿವೆ. ಅವರ ನಿರ್ದೇಶನಗಳಿಲ್ಲದೇ ಕೆಲವು ಮಾಧ್ಯಮಗಳು ಕೆಲಸ ಮಾಡುವುದಿಲ್ಲ. ನನ್ನ ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷಗಳು ಹಾಗೂ ನಾಯಕರ ವಿರುದ್ಧ ಮಾಧ್ಯಮಗಳ ಕೆಲಸ ಮಾಡಿರುವುದು ನೋಡಿಲ್ಲ.

ಈ ಸರ್ಕಾರದ ವಿರುದ್ಧ ಯುವಕರು, ರೈತರು, ಸಣ್ಣ ಕೈಗಾರಿಕೆಗಳು ಎಲ್ಲವೂ ಬೇಸತ್ತಿವೆ. ಈ ಪರಿಸ್ಥಿತಿ ವಿರುದ್ಧ ನಾವು ಒಟ್ಟಾಗಿ ಹೋರಾಟ ಮಾಡಿ 2024ರ ಚುನಾವಣೆಯಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವಿದೆ.

ರಾಹುಲ್ ಗಾಂಧಿ:

ಇಂದು ನಮ್ಮ ಎರಡನೇ ಸಭೆಯಾಗಿದ್ದು, ಇಂದಿನ ಸಭೆಯಲ್ಲಿ ಉತ್ತಮ ಚರ್ಚೆ ಆಗಿದೆ. ನಮ್ಮ ಹೋರಾಟ ಬಿಜೆಪಿ ವಿಚಾರಧಾರೆ, ಅವರ ಚಿಂತನೆ ವಿರುದ್ಧ. ಅವರು ದೇಶದ ಮೇಲೆ ಆಕ್ರಮಣ ಮಾಡಿ, ನಿರುದ್ಯೋಗ ಹರಡುತ್ತಿದ್ದು, ದೇಶದ ಸಂಪೂರ್ಣ ಸಂಪತ್ತು ಕೆಲವು ಉದ್ಯಮಿಗಳ ವಶಕ್ಕೆ ಸೇರುತ್ತಿದೆ. ಈ ಕಾರಣಕ್ಕೆ ನಾವು ನಮಗೆ ಪ್ರಶ್ನೆ ಕೇಳಿಕೊಂಡು ಈ ಹೋರಾಟ ಯಾರ ನಡುವೆ? ಇದು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವಣ ಹೋರಾಟವಲ್ಲ. ಇದು ದೇಶದ ಧ್ವನಿಯ ಪರವಾದ ಹೋರಾಟ. ಈ ಕಾರಣಕ್ಕೆ ಈ ಮೈತ್ರಿಯನ್ನು ಇಂಡಿಯಾ ಎಂದು ಹೆಸರಿಡಲಾಗಿದೆ. ಈ ಹೋರಾಟ ಎನ್ ಡಿಎ ಹಾಗೂ ಇಂಡಿಯಾ ವಿರುದ್ಧ, ಇಂಡಿಯಾ ಹಾಗೂ ಮೋದಿ ವಿರುದ್ಧದ ಹೋರಾಟ.

ಯಾರೇ ಇಂಡಿಯಾ ವಿರುದ್ಧ ನಿಂತರು ಗೆಲವು ಯಾರಿಗೆ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದ್ದು, ಕಾರ್ಯ ಯೋಜನೆ ಸಿದ್ಧಪಡಿಸಿ ನಾವು ಒಂದಾಗಿ ನಮ್ಮ ವಿಚಾರಧಾರೆಗಳನ್ನು ಜನರಿಗೆ ತಿಳಿಸಬೇಕಿದೆ.

ಬಿಜೆಪಿಯ ಸಿದ್ಧಾಂತಗಳು ಭಾರತದ ಪರಿಕಲ್ಪನೆ ಮೇಲೆ ದಾಳಿ ಮಾಡುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳು ಹೆಚ್ಚುತ್ತಿವೆ.

ಇದು ರಾಜಕೀಯ ಪಕ್ಷಗಳ ಹೋರಾಟವಲ್ಲ. ಇದು ಇಂಡಿಯಾದ ಪರಿಕಲ್ಪನೆ ರಕ್ಷಣೆಯ ಹೋರಾಟವಾಗಿದ್ದು, ನಾವು ಪ್ರಜಾಪ್ರಭುತ್ವ, ಸಂವಿಧಾನ, ಜನರ ಧ್ವನಿಯ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ಈ ಕಾರಣಕ್ಕೆ ನಾವು ನಮ್ಮ ಮೈತ್ರಿಯನ್ನು ಇಂಡಿಯಾ ಎಂದು ತೀರ್ಮಾನಿಸಿದ್ದೇವೆ.

ಮಮತಾ ಬ್ಯಾನರ್ಜಿ:

ಇಂದಿನಿಂದ ನಿಜವಾದ ಸವಾಲು ಆರಂಭವಾಗಿದೆ. ನಮ್ಮ ಮೈತ್ರಿ 26 ಪಕ್ಷಗಳ ನಡುವೆ ನಡೆದಿದೆ. ಮೊದಲು ಯುಪಿಎ ಹೆಸರಿನಲ್ಲಿ ಇತ್ತು. ಈಗ ಹೊಸ ಹೆಸರಿನಿಂದ ಕರೆಯಲ್ಪಡಲಿದೆ. ಎನ್ಡಿಎ ಈ ಹಿಂದೆ ಇತ್ತು, ಆದರೆ ಇಷ್ಟು ದಿನ ಅಸ್ತಿತ್ವದಲ್ಲಿ ಇರಲಿಲ್ಲ.

ದಲಿತರು, ಅಲ್ಪಸಂಖ್ಯಾತರು, ಹಿಂದೂ, ಮುಸಲ್ಮಾನ, ಸಿಖ್, ಅರುಣಾಚಲ ಪ್ರದೇಶ, ಮಣಿಪುರ, ಉ.ಪ್ರ. ದೆಹಲಿ, ಬಂಗಾಳ, ಬಿಹಾರ, ಮಹಾರಾಷ್ಟ್ರ ಎಲ್ಲ ಕಡೆ ಅಪಾಯವಿದೆ. ಜನರಿಂದ ಆಯ್ಕೆಯಾದ ಸರ್ಕಾರ ಕೆಡವು, ಮಾರಾಟ ಮಾಡುವುದು ಈ ಸರ್ಕಾರದ ಕೆಲಸವಾಗಿದೆ. ಹೀಗಾಗಿ ಇಂದು ನಾವೆಲ್ಲರೂ ಸೇರಿ ಇಂಡಿಯಾ ಎಂಬ ಮೈತ್ರಿಕೂಟವನ್ನು ಸ್ಥಾಪಿಸಿದ್ದೇವೆ. ಬಿಜೆಪಿ ಹಾಗೂ ಎನ್ ಡಿಎ ಇಂಡಿಯಾ ಸವಾಲನ್ನು ಎದುರಿಸಲು ಸಾಧ್ಯವೇ?

ಯುವಕರು, ರೈತರು, ಉತ್ತಮ ಆರ್ಥಿಕತೆ, ವಿದ್ಯಾರ್ಥಿಗಳು, ದಲಿತರು, ದೇಶದ ಪರವಾಗಿ ನಾವು ಇದ್ದೇವೆ. ನಮ್ಮ ಸವಾಲುಗಳು, ಹೋರಾಟ, ಪ್ರಾಚಾರ ಎಲ್ಲವನ್ನು ಇಂಡಿಯಾ ಅಡಿಯಲ್ಲಿ ಮಾಡಲಾಗುವುದು. ನಿಮಗೆ ಸಾಧ್ಯವಾದರೆ ನಮ್ಮನ್ನು ತಡೆಯಿರಿ. ವಿಪತ್ತಿನಿಂದ ಭಾರತವನ್ನು ರಕ್ಷಣೆ ಮಾಡಿ. ಭಾರತೀಯರನ್ನು ರಕ್ಷಿಸಿ.

ಬಿಜೆಪಿ ದೇಶವನ್ನು ಮಾರುವುದರಲ್ಲಿ, ಲೋಕತಂತ್ರ ಖರೀದಿಸುವಲ್ಲಿ ಮಗ್ನವಾಗಿದೆ. ಇದೇ ಕಾರಣಕ್ಕೆ ಯಾವುದೇ ಸಂಸ್ಥೆಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಯಾವುದೇ ವಿರೋಧ ಪಕ್ಷಗಳ ನಾಯಕರು ಧ್ವನಿ ಎತ್ತಿದರೆ ಅವರ ವಿರುದ್ಧ ಐಟಿ, ಇಡಿ ದಾಳಿ ಮಾಡಲಾಗುತ್ತಿದೆ.

ನಮ್ಮ ಯುದ್ಧದಲ್ಲಿ ಇಂಡಿಯಾ ಗೆಲ್ಲಲಿದೆ, ಬಿಜೆಪಿ ಸೋಲಲಿದೆ. ಈ ಮೈತ್ರಿಗೆ ಒಪ್ಪಿ ಬಂದಿರುವ ಎಲ್ಲಾ ಪಕ್ಷಗಳಿಗೆ ಧನ್ಯವಾದಗಳು. ನಮ್ಮ ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ.

ಅರವಿಂದ ಕೇಜ್ರಿವಾಲ್:

ಇಂದು ಬೆಂಗಳೂರಿನಲ್ಲಿ ನಮ್ಮ 26 ಪಕ್ಷಗಳು ಸೇರಿ ಸಭೆ ಮಾಡಿದ್ದೇವೆ. 9 ವರ್ಷಗಳ ಹಿಂದೆ ದೇಶದ ಜನ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ಬಹುಮತಗಳಿಂದ ಗೆಲ್ಲಿಸಿತ್ತು. ದೇಶಕ್ಕಾಗಿ ಕೆಲಸ ಮಾಡಲು ಅವರ ಬಳಿ ಅವಕಾಶಗಳಿದ್ದವು. ಆದರೆ ಅವರು ಯಾವುದೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿಲ್ಲ. ಎಲ್ಲಾ ಕ್ಷೇತ್ರಗಳನ್ನು ಬರ್ಬಾದ್ ಮಾಡುವಲ್ಲಿ ಯಾವುದೇ ಅವಕಾಶಗಳನ್ನು ಬಿಟ್ಟಿಲ್ಲ. ರೈಲ್ವೇ, ಆರ್ಥಿಕತೆ, ವಿಮಾನ ನಿಲ್ದಾಣ, ಭೂಮಿ, ಆಕಾಶ ಎಲ್ಲವನ್ನು ಮಾರಿದ್ದಾರೆ.

ಇಂದು ದೇಶದಲ್ಲಿ ಯುವಕರು, ರೈತರು, ಕೈಗಾರಿಕೆ, ಮಹಿಳೆಯರು, ಕಾರ್ಮಿಕರು ಎಲ್ಲರೂ ಬೇಸತ್ತಿದ್ದಾರೆ. ಹೀಗಾಗಿ ಇಂದು ಈ 26 ಪಕ್ಷಗಳು ತಮಗಾಗಿ ಸೇರಿಲ್ಲ. ದೇಶದ ಹಿತ ಕಾಯಲು ಸೇರಿದ್ದು, ಹೊಸ ಭಾರತದ ನಿರ್ಮಾಣ, ಸುಖ, ಶಾಂತಿ, ಸೌಹಾರ್ದತೆಯ ಭಾರತವನ್ನು ಸ್ಥಾಪಿಸಲು ನಾವು ಇಲ್ಲಿ ಸೇರಿದ್ದೇವೆ.

ಉದ್ಧವ್ ಠಾಕ್ರೆ:

ನಮ್ಮಲ್ಲಿ ವಿವಿಧ ವಿಚಾರಧಾರೆಗಳ ಪಕ್ಷಗಳು ಒಂದಾಗಿ ಸೇರಿವೆ. ರಾಜತಂತ್ರದಲ್ಲಿ ವಿಭಿನ್ನ ವಿಚಾರಧಾರೆಗಳು ಇರಬೇಕು.ಈ ವಿಭಿನ್ನತೆ ನಡುವೆ ನಾವು ಒಂದಾಗಿರುವುದಕ್ಕೆ ಕಾರಣ ನಮಗಾಗಿ ಅಲ್ಲ, ನಮ್ಮ ಪರಿವಾರದಂತಿರುವ ದೇಶವನ್ನು ರಕ್ಷಿಸಲು. ನಮ್ಮ ಹೋರಾಟ ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ವಿರುದ್ಧ ಅಲ್ಲ. ನಮ್ಮ ಹೋರಾಟ ನೀತಿ ವಿರುದ್ಧ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಇಂದು ಹೋರಾಟ ಮಾಡಲಾಗುವುದು. ಮುಂದೆನಾಗಲಿದೆ ಎಂದು ಭಯಭೀತರಾಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ನಾವಿದ್ದೇವೆ ಎಂದು ಹೇಳಲು ನಾವು ಇಲ್ಲಿ ಸೇರಿದ್ದೇವೆ. ಓರ್ವ ವ್ಯಕ್ತಿ ಅಥವಾ ಪಕ್ಷ ಇಡೀ ದೇಶವಾಗಲು ಸಾಧ್ಯವಿಲ್ಲ. ನಾವೆಲ್ಲರೂ ಸೇರಿ ದೇಶವನ್ನು ಸುರಕ್ಷಿತವಾಗಿಡುತ್ತೇವೆ.

ಪ್ರಶ್ನೋತ್ತರ:

ಈ ಇಂಡಿಯಾವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ‘ನಾವು 11 ಸದಸ್ಯರು ಸಮನ್ವಯ ಸಮಿತಿ ರಚಿಸುತ್ತಿದ್ದು, ಆ ಸಮಿತಿ ನಿರ್ಧರಿಸಲಿದೆ. ಈ ಸಮಿತಿ ಸದಸ್ಯರನ್ನು ಮುಂಬೈ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು’ ಎಂದು ತಿಳಿಸಿದರು.

ಯುಸಿಸಿ ವಿಚಾರವಾಗಿ ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬಂದಿವೆಯೇ ಎಂದು ಕೇಳಿದ ಪ್ರಶ್ನೆಗೆ, ‘ಯುಸಿಸಿ ಮಸೂದೆ ನನಗೆ ಸಿಕ್ಕಿಲ್ಲ. ನಿಮ್ಮ ಬಳಿ ಇದ್ದರೆ ಅದನ್ನು ನೀಡಿ. ಮಸೂದೆ ಇಲ್ಲದೆ ಅದರ ಬಗ್ಗೆ ಚರ್ಚೆ ಮಾಡಲು ಹೇಗ ಸಾಧ್ಯ? ನಾವು ಮಣಿಪುರ, ನಿರುದ್ಯೋಗ, ಹಣದುಬ್ಬರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಹೇಗೆ ಹೋರಾಟ ಮಾಡಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ವಿಚಾರವಾಗಿ ವಿಸ್ತಾರವಾಗಿ ಚರ್ಚೆ ಮಾಡಲಾಗಿದೆ’ ಎಂದು ತಿಳಿಸಿದರು.

ಸೀಟು ಹಂಚಿಕೆ ವಿಚಾರವಾಗಿ ಹೇಗೆ ತೀರ್ಮಾನ ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ‘ಇದು ದೊಡ್ಡ ವಿಚಾರವಲ್ಲ. ನಮ್ಮ ಸಮನ್ವಯ ಸಮಿತಿ ತೀರ್ಮಾನ ಮಾಡಲಿದೆ. ಎಲ್ಲಾ ನಾಯಕರು, ಸಮಿತಿ ಸೇರಿ ತೀರ್ಮಾನ ಮಾಡಲಿದೆ’ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸ್ಥಳೀಯ ಪಕ್ಷಗಳನ್ನು ಇಬ್ಬಾಗ ಮಾಡುತ್ತಿದ್ದು, ಈ ಸಮಯದಲ್ಲಿ ನೀವು ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಹೇಗೆ ಒಗ್ಗಟ್ಟಾಗಿ ಕೊಂಡೊಯ್ಯುತ್ತೀರಿ ಎಂಬ ಪ್ರಶ್ನೆಗೆ, ‘ಎನ್ ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಇಲ್ಲಿದ್ದಾರೆ. ಶಾಸಕರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ ಜನ ಈ ಪ್ರಮುಖ ನಾಯಕರ ಬೆನ್ನಿಗೆ ನಿಲ್ಲಲಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ. ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ’ ಎಂದು ಉತ್ತರಿಸಿದರು.

Join Whatsapp
Exit mobile version