ನವದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದ ತೃಣಮೂಲ ಕಾಂಗ್ರೆಸ್ ಅಚ್ಚರಿ ಎಂಬಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಚೇರಿಯಲ್ಲಿ ನಡೆದ ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ ಪಾಲ್ಗೊಂಡರು.
ತೃಣಮೂಲ ಕಾಂಗ್ರೆಸ್ ಪರ ಪ್ರಸೂನ್ ಬ್ಯಾನರ್ಜಿ ಮತ್ತು ಜವ್ ಹರ್ ಸರ್ಕಾರ ಮಾತುಕತೆಯಲ್ಲಿ ಭಾಗವಹಿಸಿದ್ದರು. ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ಪ್ರತಿ ಪಕ್ಷಗಳು ಒಟ್ಟುಗೂಡಿ ಯಾವ ರೀತಿಯ ಕಾರ್ಯತಂತ್ರ ಹೆಣೆಯಬೇಕು ಎಂಬ ವಿಷಯದಲ್ಲಿ ಚರ್ಚೆ ನಡೆಯಿತು.
ರಾಹುಲ್ ರನ್ನು ಅನರ್ಹಗೊಳಿಸಿದ್ದರ ವಿರುದ್ಧ ಪ್ರತಿಭಟನಾರ್ಥವಾಗಿ ಕಾಂಗ್ರೆಸ್ ಸಂಸದರೆಲ್ಲ ಕಪ್ಪು ಅಂಗಿ ತೊಟ್ಟಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ಸಿನ ವಿರೋಧ ಪಕ್ಷವಾಗಿರುವ ಭಾರತ್ ರಾಷ್ಟ್ರ ಸಮಿತಿಯು ಈ ಕಪ್ಪಂಗಿ ಪ್ರತಿಭಟನೆಯಲ್ಲಿ ಭಾಗವಹಿಸಿತು. ಹಾಗೆಯೇ ಶಿವಸೇನೆ ಉದ್ಧವ್ ಠಾಕ್ರೆ ಗುಂಪು ಸಹ ಪಾಲ್ಗೊಂಡಿತು.
ಬಿಜೆಪಿಯ ಕ್ಷಮಾಪಣೆ ಕೋರಿಕೆ ಬಗ್ಗೆ ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ ಎಂದು ಸಾವರ್ಕರ್ ಹೇಳಿದ್ದನ್ನು ಶಿವಸೇನೆ ತೀವ್ರವಾಗಿ ಖಂಡಿಸಿತ್ತು. ಸಾವರ್ಕರ್ ನಮ್ಮ ನಾಯಕ ಎಂದೂ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ಸಮಾಜವಾದಿ ಪಕ್ಷ, ಯುನೈಟೆಡ್ ಜನತಾದಳ, ಭಾರತ್ ರಾಷ್ಟ್ರ ಸಮಿತಿ, ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷ, ರಾಷ್ಟ್ರೀಯ ಜನತಾ ದಳ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ಭಾರತೀಯ ಕಮ್ಯೂನಿಸ್ಟ್ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಮಕ್ಕಳ್ ದ್ರಾವಿಡ ಮುನ್ನೇತ್ರ ಕಳಗಂ, ಕೇರಳ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ರಿಪಬ್ಲಿಕನ್ ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ನ್ಯಾಸನಲ್ ಕಾನ್ಫರೆನ್ಸ್, ಉದ್ಧವ್ ಶಿವಸೇನೆ ಸೇರಿ ಒಟ್ಟು 17 ಪಕ್ಷಗಳು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಪಾಲುಗೊಂಡವು.
ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್ ಪಕ್ಷವು ಸಿಪಿಎಂ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಟಿಎಂಸಿ ಕಡೆಯ ನಿಮಿಷದಲ್ಲಿ ಭಾಗವಹಿಸಿದೆ. ರಾಹುಲ್ ಗಾಂಧಿಯವರು ಸಂಸತ್ತಿನಿಂದ ಅನರ್ಹಗೊಂಡಾಗಲೂ ಟಿಎಂಸಿ ದಿವ್ಯ ಮೌನವನ್ನೇ ವಹಿಸಿತ್ತು. ಪ್ರತಗಳ ಒಗ್ಗಟ್ಟಿನ ಕರೆಗೂ ಕಿವಿಗೊಟ್ಟಿರಲಿಲ್ಲ. ಅಂತಿಮವಾಗಿ ಪ್ರತಿಪಕ್ಷಗಳ ಕಾರ್ಯತಂತ್ರ ಸಭೆಯಲ್ಲಿ ಭಾಗವಹಿಸಿದೆ.
ಕಾಂಗ್ರೆಸ್ ಮತ್ತು ಸಿಪಿಎಂ ಮೈತ್ರಿ ಸಾಧಿಸಿ ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರುವುದರಿಂದ ಮುಂದಿನ 2024ರ ಲೋಕ ಸಭಾ ಚುನಾವಣೆಯಲ್ಲಿ ಈ ಪ್ರತಿಪಕ್ಷಗಳ ಕೂಟದಲ್ಲಿ ಸೇರುವುದಿಲ್ಲ ಎಂದು ಈ ತಿಂಗಳ ಮೊದಲ ವಾರ ಮಮತಾ ಬ್ಯಾನರ್ಜಿಯವರು ಹೇಳಿದ್ದರು. ಕಾಂಗ್ರೆಸ್’ನ ಹಲವು ಮೈತ್ರಿಗಳಿಂದ ಬಿಜೆಪಿ ಸಹಾಯ ಮಾಡುತ್ತಿರುವಾಗ ಅದು ಹೇಗೆ ಬಿಜೆಪಿ ವಿರೋಧಿ ಪಕ್ಷ ಎಂದು ಹೇಳಿಕೊಳ್ಳುತ್ತದೆ ಎಂದು ಕೂಡ ಮಮತಾ ಪ್ರಶ್ನಿಸಿದ್ದರು.
ಕಾಂಗ್ರೆಸ್ ಕಳೆದೆರಡು ದಿನಗಳಿಂದ ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ವಾದ್ರಾ ಅವರು ಬಿಜೆಪಿ ಸರಕಾರವು ಬಲಿದಾನವಾದವರ ಮಗನ ಮಾತನ್ನು ಮುಚ್ಚಿಸಲು ಈ ತಂತ್ರ ಅನುಸರಿಸಿದೆ ಎಂದು ಹೇಳಿದರು. ನಿನ್ನೆ ದಿಲ್ಲಿ ರಾಜಘಾಟ್ ನೆದುರು ಕಾಂಗ್ರೆಸ್ಸಿಗರು ಇಡೀ ದಿನ ಸಂಕಲ್ಪ ಸತ್ಯಾಗ್ರಹ ನಡೆಸಿದರು.
ಕಾನೂನು ರೀತ್ಯಾ ರಾಹುಲ್ ಗಾಂಧಿಯವರು ಅನರ್ಹರಾಗಿದ್ದಾರೆ. ಕಾಂಗ್ರೆಸ್ಸಿಗರು ಸಂವಿಧಾನ ಮತ್ತು ಕೋರ್ಟುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ.
ಅದಕ್ಕೆ ಮೊದಲೇ 14 ವಿರೋಧ ಪಕ್ಷಗಳು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಿಸುತ್ತಿದೆ ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿವೆ. ಅದರ ವಿಚಾರಣೆ ಏಪ್ರಿಲ್ 5ರಂದು ನಡೆಯಲಿದೆ.
52ರ ಹರೆಯದ ರಾಹುಲ್ ಗಾಂಧಿಯವರನ್ನು ಮೋದಿ (ನೀರವ್ ಇತ್ಯಾದಿ) ಕಳ್ಳರ ಉಪನಾಮ ಎಂಬ ಹೇಳಿಕೆಯ 2019ರ ಮೊಕದ್ದಮೆಯಲ್ಲಿ ಸೂರತ್ ಕೋರ್ಟ್ ಎರಡು ವರ್ಷ ಗಳ ಶಿಕ್ಷಗೆ ಗುರಿ ಮಾಡಿದೆ. ಮೇಲ್ಮನವಿಗೆ ಇತ್ಯಾದಿಗೆ ಎಂದು 30 ದಿನಗಳ ಕಾಲಾವಕಾಶವನ್ನೂ ಕೋರ್ಟ್ ನೀಡಿದೆ.
ಅಷ್ಟು ಬೇಗ ಸಂಸತ್ತಿನ ಸೆಕ್ರೆಟೆರಿಯೆಟ್ ಕ್ರಮ ತೆಗೆದುಕೊಂಡುದು ನಿರಂಕುಶಾಧಿಕಾರದ ನಡೆಯಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ಕೊಲೆ ಎಂದು ಪ್ರತಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ನಾವು ಮೇಲಿನ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ರಾಹುಲ್ ಗಾಂಧಿಯವರ ತಂಡವು ಹೇಳಿದೆ. ಶಿಕ್ಷೆ ರದ್ದಾಗದಿದ್ದಲ್ಲಿ ಮುಂದಿನ ಎಂಟು ವರ್ಷ ರಾಹುಲ್ ಗಾಂಧಿಯವರಿಗೆ ಚುನಾವಣೆ ನಿಲ್ಲಲು ಅವಕಾಶ ಇರುವುದಿಲ್ಲ ಎನ್ನುವುದೂ ಇಲ್ಲಿನ ಸಮಸ್ಯೆಯಾಗಿದೆ.