ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ರಾಜ್ಯದ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಆದರೂ ವಿರೋಧ ಪಕ್ಷಗಳು ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ ನೀಡುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

- Advertisement -

ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾರೊಬ್ಬರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು. ನಾವು ನಮ್ಮ ರಾಜ್ಯದ ಹಿತ ಕಾಯುತ್ತಿದ್ದೇವೆ. ಹೋರಾಟ ಮಾಡಬಾರದು ಎಂದು ನಾವು ಹೇಳುವುದಿಲ್ಲ. ರೈತ ಸಂಘಟನೆ, ಕನ್ನಡ ಸಂಘಟನೆಗಳು, ಚಿತ್ರರಂಗ, ವಿರೋಧ ಪಕ್ಷಗಳ ಹೋರಾಟಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದರು.

ಇಂತಹ ಸಂಕಷ್ಟದ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಿಮ್ಮ ಜೊತೆ ನಿಲ್ಲಬೇಕಿತ್ತಲ್ಲವೆ ಎಂದು ಕೇಳಿದಾಗ, “ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರು ಹೊಸ ಹುರುಪಿನಲ್ಲಿ ಅವರದೇ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರು ನೀರಿನಲ್ಲಿ ರಾಜಕಾರಣ ಮಾಡಿದರೆ, ನಾವು ರೈತರನ್ನು ಕಾಪಾಡುತ್ತಿದ್ದೇವೆ. ರಾಜ್ಯದ ಹಿರಿಯ ನಾಯಕರಾದ ದೇವೇಗೌಡರು ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಯಾವ ಸಲಹೆ ಕೊಟ್ಟಿದ್ದಾರೆ ಎಂದು ನೀವೇ ಹೇಳಿ. ನಾನು ಏನಾದರೂ ಹೇಳಿದರೆ ಅದು ರಾಜಕಾರಣ ಆಗುತ್ತದೆ. ನೀವು ಈ ಸಂದರ್ಶನ, ಅದರಲ್ಲಿ ದೇವೇಗೌಡರು ಏನು ಹೇಳಿದ್ದಾರೆ ಎಂಬುದನ್ನು ನೋಡಿದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ” ಎಂದು ತಿಳಿಸಿದರು.



Join Whatsapp
Exit mobile version