Home ಟಾಪ್ ಸುದ್ದಿಗಳು ಅಪಾಯದಲ್ಲಿ ಪ್ರಜಾಪ್ರಭುತ್ವ ಬ್ಯಾನರ್ ಹಿಡಿದು ರಾಷ್ಟ್ರಪತಿ ಭವನಕ್ಕೆ ಪ್ರತಿಪಕ್ಷಗಳ ನಡಿಗೆ

ಅಪಾಯದಲ್ಲಿ ಪ್ರಜಾಪ್ರಭುತ್ವ ಬ್ಯಾನರ್ ಹಿಡಿದು ರಾಷ್ಟ್ರಪತಿ ಭವನಕ್ಕೆ ಪ್ರತಿಪಕ್ಷಗಳ ನಡಿಗೆ

ನವದೆಹಲಿ: ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಅದಾನಿ ಅವ್ಯವಹಾರಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ರಾಷ್ಟ್ರಪತಿ ಭವನಕ್ಕೆ ಜಾಥಾ ನಡೆಸಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಮನವಿ ಸಲ್ಲಿಸಿದರು.
ದೆಹಲಿಯ ವಿಜಯ ಚೌಕದಿಂದ ರಾಷ್ಟ್ರಪತಿ ಭವನಕ್ಕೆ ಕಾಂಗ್ರೆಸ್ ನಾಯಕತ್ವದಲ್ಲಿ ಶುಕ್ರವಾರ ವಿಪಕ್ಷ ಸದಸ್ಯರು ಹೆಜ್ಜೆ ಹಾಕಿದರು. ಡೆಮಾಕ್ರಸಿ ಇನ್ ಡೇಂಜರ್ ಎಂಬ ದೊಡ್ಡ ಬ್ಯಾನರನ್ನು ಅವರು ಹಿಡಿದಿದ್ದರು. ಅದಾನಿ ಜೊತೆಗಿನ ಸಖ್ಯದ ಕಾರಣವಾಗಿಯೇ, 2019ರ ಮೊಕದ್ದಮೆ ಸಂಬಂಧ ಈಗ ರಾಹುಲ್’ಗೆ ಎರಡು ವರ್ಷಗಳ ಶಿಕ್ಷೆ ನೀಡಲಾಗಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಆರೋಪ ಮಾಡಿದರು. ಅದಾನಿ ಎಲ್’ಐಸಿ ಮತ್ತು ಎಸ್’ಬಿಐ ಮುಳುಗಿಸುತ್ತಿರುವುದರ ಬಗ್ಗೆ ಅವರು ಎಚ್ಚರಿಸಿದರು.
ಇದೇ ವೇಳೆಯಲ್ಲಿ ದೇಶದ ನಾನಾ ಕಡೆ ರಾಜ್ಯ ಕಾಂಗ್ರೆಸ್’ಗಳು ಪ್ರತಿಭಟನೆಗಳನ್ನು ನಡೆಸಿದವು. ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕೆಲವು ನಾಯಕರನ್ನು ಪೊಲೀಸರು ಬಂಧಿಸಿದರು.
ದಿಲ್ಲಿಯ ಮಾರ್ಚ್ ನಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು “ಈ ನಡಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ” ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಲೋಕ ಸಭಾ ಕಲಾಪದಲ್ಲಿ ಭಾಗವಹಿಸಿದರು.
ಆದರೆ ಬೆಳಿಗ್ಗೆಯೆ ಲೋಕ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.
ದಿಲ್ಲಿ ಮಾರ್ಚ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 12 ವಿರೋಧ ಪಕ್ಷಗಳ ಸದಸ್ಯರು ಭಾಗವಹಿಸಿದರು.
ರಾಹುಲ್ ಗಾಂಧಿಯವರನ್ನು ಲೋಕ ಸಭೆಯಲ್ಲಿ ಮಾತನಾಡಲು ಬಿಡಬಾರದು ಎನ್ನುವುದಕ್ಕಾಗಿಯೇ ಈ ಎಲ್ಲ ಘಟನೆಗಳು ಕೊಂಡಿಯಾಗಿ ನಡೆದಿವೆ ಎಂದು ಆಪಾದಿಸಲಾಯಿತು.

Join Whatsapp
Exit mobile version