Home ಟಾಪ್ ಸುದ್ದಿಗಳು ಕ್ರೀಡಾ ಇಲಾಖೆಯ ಕಾರ್ಯವೈಖರಿ ತಿಳಿಯಲು ಒಂದು ದಿನ ಯುವ ಕ್ರೀಡಾಧಿಕಾರಿಯಾಗಲು ಯುವತಿಯರಿಗೆ ಅವಕಾಶ: ಸಚಿವ ಡಾ.ನಾರಾಯಣಗೌಡ

ಕ್ರೀಡಾ ಇಲಾಖೆಯ ಕಾರ್ಯವೈಖರಿ ತಿಳಿಯಲು ಒಂದು ದಿನ ಯುವ ಕ್ರೀಡಾಧಿಕಾರಿಯಾಗಲು ಯುವತಿಯರಿಗೆ ಅವಕಾಶ: ಸಚಿವ ಡಾ.ನಾರಾಯಣಗೌಡ

ಬೆಂಗಳೂರು: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಅಂಗವಾಗಿ 18 ವರ್ಷದಿಂದ 23 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ “ಒಂದು ದಿನ ಯುವ ಕ್ರೀಡಾ ಅಧಿಕಾರಿ” ಯಾಗಿ ಅನುಭವ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

‘ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ’ಯ ಪ್ರಯುಕ್ತ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನ್ ನಮ್ಮ ದೇಶದ 18 ರಿಂದ 23ರ ವಯಸ್ಸಿನ ಯುವತಿಯರಿಗೆ ಯುಕೆಯ ಉನ್ನತ ರಾಜತಾಂತ್ರಿಕ ಅಧಿಕಾರಿಯ ಒಂದು ದಿನದ ಆಡಳಿತ ಅನುಭವ ಪಡೆಯಲು ಅವಕಾಶವನ್ನು ಕಲ್ಪಿಸಲು ‘ಹೈಕಮಿಷನರ್ ಫಾರ್ ಎ ಡೇ’ ಸ್ಪರ್ಧೆ ಏರ್ಪಡಿಸಿದ್ದು ಅದಕ್ಕಾಗಿ ಆಸಕ್ತ ಯುವತಿಯರಿಂದ ವಿವರಗಳನ್ನು ಆಹ್ವಾನಿಸಿದೆ. ಅದೇ ರೀತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ/ಉಪ ನಿರ್ದೇಶಕರ ಕಾರ್ಯ ವೈಖರಿಯನ್ನು ಪರಿಚಯಿಸಲು 18 ರಿಂದ 23 ವರ್ಷ ವಯಸ್ಸಿನ ಯುವತಿಯರು ಎಲ್ಲಾ ಜಿಲ್ಲೆಗಳ ಸಹಾಯಕ ಉಪ ನಿರ್ದೇಶಕರ ಜೊತೆಯಲ್ಲಿ ಒಂದು ದಿನ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 11, ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಂದು ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ಅನುಭವ ಪಡೆಯಲು ಆಸಕ್ತ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಯುವತಿಯರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 25 ರವರೆಗೂ ಕಾಲಾವಕಾಶ ನೀಡಲಾಗಿದೆ. ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

Join Whatsapp
Exit mobile version