ಮುಂಬೈ: ಭಾರತವು ಮಹೇಂದ್ರ ಸಿಂಗ್ ಧೋನಿಯಿಂದಾಗಿ 2011ರ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ಎನ್ನುವ ವಾದಕ್ಕೆ ತಿರುಗೇಟು ನೀಡಿರುವ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಧೋನಿಯಿಂದ ಮಾತ್ರ ವಿಶ್ವಕಪ್ ಗೆದ್ದಿದ್ದರೆ ಉಳಿದವರೇನು ಲಸ್ಸಿ ಕುಡಿಯಲು ಹೋಗಿದ್ದರೇ ಎಂದು ವ್ಯಂಗ್ಯವಾಡಿದ್ದಾರೆ.
ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭ ಈ ಕುರಿತು ಹೇಳಿಕೆ ನೀಡಿರುವ ಹರ್ಭಜನ್, ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ, ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತು ಎಂದು ವೈರಲ್ ಆಗುತ್ತದೆ, ಆದರೆ ಭಾರತ ವಿಶ್ವಕಪ್ ಗೆದ್ದಾಗ ಮಾತ್ರವೇಕೆ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಗೆಲ್ಲಿಸಿದ್ದಾರೆ ಎನ್ನುತ್ತಾರೆ ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಉಳಿದ 10 ಮಂದಿಯೇನು ಅಲ್ಲಿಗೆ ಲಸ್ಸಿ ಕುಡಿಯಲು ಹೋಗಿದ್ದರೇ, ಗೌತಮ್ ಗಂಭೀರ್ ಏನು ಮಾಡಿದರು? ಉಳಿದ ಆಟಗಾರರು ಏನು ಮಾಡಿದರು ? ಕ್ರಿಕೆಟ್ ಎನ್ನುವುದು ಟೀಮ್ ಗೇಮ್. ಒಂದು ತಂಡದ 7-8 ಮಂದಿ ಉತ್ತಮವಾಗಿ ಆಡಿದಾಗ ಮಾತ್ರ ಗೆಲ್ಲಲು ಸಾಧ್ಯ ಎಂದಿದ್ದಾರೆ. ಸದ್ಯ ಹರ್ಭಜನ್ ರ ಧೋನಿ ಕುರಿತಾಗಿರುವ ಹೇಳಿಕೆಯು ಮಾಹಿ ಅಭಿಮಾನಿಗಳನ್ನು ಕೆರಳಿಸಿದ್ದು, ಪರ ವಿರೋಧಗಳ ಚರ್ಚೆಗೂ ಕಾರಣವಾಗಿದೆ.