ವಿಶ್ವ ಸಂಸ್ಥೆ: ವಿಶ್ವದಾದ್ಯಂತ ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿಯ ಹತ್ಯೆ ಆತ್ಮೀಯ ಸಂಗಾತಿ ಅಥವಾ ಕುಟುಂಬದ ಸದಸ್ಯರಿಂದಲೇ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಮಹಿಳೆಯರು, ಯುವತಿಯರು ಅಥವಾ ಬಾಲಕಿಯರ ವಿರುದ್ಧ ಹಿಂಸಾಚಾರವು ವಿಶ್ವದ ಅತ್ಯಂತ ವ್ಯಾಪಕವಾದ “ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ದೇಶಗಳು ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸುವಂತೆ ಅವರು ಕರೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಬೆನ್ನಲ್ಲೇ ಈ ಹೇಳಿಕೆ ಬಂದಿದ್ದು, ನವೆಂಬರ್ 25 ರಂದು ಆಚರಿಸಲಾಗುವ ವಿಶ್ವ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ದಿನದ ಹಿನ್ನೆಲೆಯಲ್ಲಿ ಗುಟೆರಸ್ ಈ ಹೇಳಿಕೆ ನೀಡಿದ್ದಾರೆ.
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯವು ವಿಶ್ವದ ಅತ್ಯಂತ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರತಿ 11 ನಿಮಿಷಗಳಿಗೊಮ್ಮೆ, ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ನಿಕಟ ಸಂಗಾತಿ ಅಥವಾ ಕುಟುಂಬದ ಸದಸ್ಯರು ಹತ್ಯೆ ಮಾಡುತ್ತಾರೆ. COVID-19 ಸಾಂಕ್ರಾಮಿಕದಿಂದ ಆರ್ಥಿಕ ಪ್ರಕ್ಷುಬ್ಧತೆಯಂತಹ ಇತರ ಒತ್ತಡಗಳು ಅನಿವಾರ್ಯವಾಗಿ ಇನ್ನಷ್ಟು ದೈಹಿಕ ಮತ್ತು ಮೌಖಿಕ ನಿಂದನೆಗೆ ಕಾರಣವಾಗುತ್ತವೆ ಎಂದಿದ್ದಾರೆ.
ಶ್ರದ್ಧಾ ವಾಲ್ಕರ್ ಹತ್ಯೆ ಭಾರತದಲ್ಲಿ ಅದರ ಕ್ರೂರತೆಯನ್ನು ಬಿಚ್ಚಿಟ್ಟಿದ್ದು, ಸ್ತ್ರೀದ್ವೇಷ ಭಾಷಣದಿಂದ ಕಿರುಕುಳ, ಅಸಭ್ಯ ಚಿತ್ರಗಳನ್ನು ಬಳಸಿ ನಿಂದನೆ ಸೇರಿದಂತೆ ಮಹಿಳೆಯರು ಮತ್ತು ಹುಡುಗಿಯರು ಅತಿರೇಕದ ಆನ್ಲೈನ್ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ತಾರತಮ್ಯ, ಹಿಂಸಾಚಾರ ಮತ್ತು ನಿಂದನೆಯ ಎಲ್ಲಾ ಹಂತಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಭಾಗವಹಿಸುವಿಕೆಯನ್ನು ಮಿತಿಗೊಳಿಸುತ್ತದೆ. ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಜಗತ್ತಿಗೆ ಅಗತ್ಯವಿರುವ ಸಮಾನ ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.
2026 ರ ವೇಳೆಗೆ ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಚಳವಳಿಗಳಿಗೆ 50 ಪ್ರತಿಶತದಷ್ಟು ಹಣವನ್ನು ಹೆಚ್ಚಿಸಲು ಸರ್ಕಾರಗಳಿಗೆ ಕರೆ ನೀಡಿದ ಗುಟೆರೆಸ್, ಎಲ್ಲರೂ “ಮಹಿಳಾ ಹಕ್ಕುಗಳ ಪರವಾಗಿ ನಿಂತು ನಮ್ಮ ಧ್ವನಿಯನ್ನು ಎತ್ತುವಂತೆ” ಮತ್ತು “ನಾವೆಲ್ಲರೂ ಸ್ತ್ರೀವಾದಿಗಳು” ಎಂದು ಹೆಮ್ಮೆಯಿಂದ ಘೋಷಿಸಬೇಕೆಂದು ಒತ್ತಾಯಿಸಿದರು.