ಲಕ್ನೋ: ಝಿಯಾ ಉರ್ ರಹ್ಮಾನ್ ಎಂಬಾತ ತನ್ನ ನೆರೆಯ ತನು ಸೈನಿ ಎಂಬಾಕೆಯ ಮನೆಯಲ್ಲಿ ಥಳಿಸಿ ಕೊಲ್ಲಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದಾದ ಕೆಲವೇ ಗಂಟೆಗಳ ಬಳಿಕ ತನು ಸೈನಿ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಸದ್ಯ ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಬಲಿಯಾದ ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನತೆ ನೆಲೆಸಿದ್ದು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ತುಕಡಿಯನ್ನು ಎರಡೂ ಕುಟುಂಬಗಳ ಮನೆಗಳ ಹೊರಗೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಪಶ್ಚಿಮದ ಈ ಹಳ್ಳಿಯ ಒಂದು ಮನೆಯಲ್ಲಿ 10 ಗಂಟೆಗಳ ಅಂತರದಲ್ಲಿ ಎರಡು ಯುವಕರು ಜೀವ ಕಳೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದೂರು ಮತ್ತು ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಕಡೆಯವರು ಪರಸ್ಪರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾರನ್ನೂ ಬಂಧಿಸಿಲ್ಲ.
ಮುಸ್ಲಿಮರು ಪ್ರಾಬಲ್ಯವಾಗಿರುವ ಗ್ರಾಮದಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಝಿಯಾ ಅವರ ತಂದೆ ಮುಹಮ್ಮದ್ ಅಯ್ಯೂಬ್ ಅವರು ಪ್ರತಿಕ್ರಿಯಿಸಿ, ನನ್ನ ಮಗನ ಮೇಲೆ ಯಾಕೆ ದಾಳಿ ನಡೆಸಿ, ಕೊಲೆ ಮಾಡಲಾಗಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಮುಂಜಾನೆ 2 ಗಂಟೆಗೆ ನನ್ನ ಮಗನ ಮೊಬೈನ್’ನಿಂದ ನನ್ನ ಮೊಬೈಲ್’ಗೆ ಸ್ಥಳೀಯ ಪೊಲೀಸರೊಬ್ಬ ಕರೆ ಮಾಡಿ, ನಿಮ್ಮ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ ಮತ್ತು ಪ್ರಜ್ಞಾಹೀನನಾಗಿದ್ದಾನೆ ಎಂದು ತಿಳಿಸಿರುವುದಾಗಿ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ನಾನು ತನು ಸೈನಿ ಮನೆಗೆ ಧಾವಿಸಿ, ಗಂಭೀರವಾಗಿ ಗಾಯಗೊಂಡ ಝಿಯಾನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದೆ. ಆತನ ಸ್ಥಿತಿ ಗಂಭೀರವಾಗಿರುವ ಕಾರಣ ಆತನಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಸಾಧ್ಯವಾಗಿರಲಿಲ್ಲ ಮತ್ತು ನಾವು ಅವನನ್ನು ಅಲ್ಲಿಂದ ಡೆಹ್ರಾಡೂನ್’ನ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಆದರೆ ವೈದ್ಯಕೀಯ ಚಿಕಿತ್ಸೆ ನೀಡುವ ಮೊದಲೇ ಝಿಯಾ ಮೃತಪಟ್ಟಿದ್ದಾನೆ ಎಂದು ಝಿಯಾ ತಂದೆ ಅಯ್ಯೂಬ್ ತಿಳಿಸಿದ್ದಾರೆ.
ಈ ಮಧ್ಯೆ ಝಿಯಾ ಎಂಬವನನ್ನು ಕಳ್ಳನೆಂದು ಕೆಲವು ಅಪರಿಚಿತರು ಲಾಠಿ ಮತ್ತು ಕಬ್ಬಿಣದ ರಾಡ್’ನಿಂದ ಹಲ್ಲೆ ನಡೆಸಿದ ಪರಿಣಾಮ ಆತ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತನು ಸೈನಿ ಕುಟುಂಬ ಮಾಹಿತಿ ನೀಡಿದ್ದು, ಈ ಕೊಲೆಗೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದೆ. ಇದಾದ ಬಳಿಕ ಝಿಯಾ ಕೊಲೆಗೆ ಸಂಬಂಧಿಸಿದಂತೆ ತನ್ನ ಪತಿಯನ್ನು ವಿಚಾರಣೆಗೆ ಕರೆದೊಯ್ದ ಆಘಾತದಿಂದ ಮನನೊಂದು ಬುಧವಾರ ಬೆಳಗ್ಗೆ 11 ಗಂಟೆಗೆ ನೇಣು ಬಿಗಿದು ತನು ಸೈನಿ ಆತ್ಮಹತ್ಯೆ ನಡೆಸಿದ್ದಾಳೆ ಎಂದು ಆಕೆಯ ತಾಯಿ ಸುನೇಶ್ ದೇವಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರ ವಿರುದ್ಧ ಪರಸ್ಪರ ಪ್ರಕರಣ ದಾಖಲಿಸಲಾಗಿದ್ದು, ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.