ಬೆಂಗಳೂರು: ಉಪಚುನಾವಣೆ ಫಲಿತಾಂಶದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಎರಡೂ ಸೇರಿ ಈ ರೀತಿ ಪೆಟ್ರೋಲ್ ಡೀಸೆಲ್ ಕಡಿಮೆ ಆಗಿರುವುದು ಉಪಚುನಾವಣೆಯ ಫಲಿತಾಂಶದ ಪರಿಣಾಮ ಆಗಿದೆ. ರಾಜ್ಯದ ಉದ್ದಗಲಕ್ಕೂ ಚುನಾವಣೆ ನಡೆದಿಲ್ಲ, ಕೇವಲ ಉಪಚುನಾವಣೆಯಲ್ಲಿಯೇ ಜನ ಸಂದೇಶ ಕೊಟ್ಟಿದ್ದಾರೆ. ಇದು ಕೇಂದ್ರಕ್ಕೆ ಎಚ್ಚರಿಕೆ ಗಂಟೆ ಆಗಬೇಕು. ನಾವು ಹೇಳಿದರೆ ಕೇಳಲ್ಲ,
ಮತದಾರರೇ ಹಸ್ತದ ಮೂಲಕ ಉತ್ತರ ಕೊಡಬೇಕು ಅಂತ ಹೇಳಿದ್ದೆವು. ಪ್ರಬುದ್ದ ಮತದಾರರೇ ಸರ್ಕಾರಕ್ಕೆ ಮಾಲೀಕರು ಎನ್ನೋದನ್ನು ತೋರಿಸಿದ್ದಾರೆ. ಮತದಾರರಿಗೆ ಫಲ ಸಿಕ್ಕಿದೆ. ಇಷ್ಟಕ್ಕೇ ಸಾಲದು, ಎಲ್ಲರಿಗೂ ಉದ್ಯೋಗ ಸಿಗಬೇಕು ಎಂದು ತಿಳಿಸಿದ್ದಾರೆ.
ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆ, ಮತದಾರನ ತೀರ್ಪಿನಿಂದ ಬೆಳಕು ಬರಲಿದೆ ಎಂದು ನಾನು ನಿನ್ನೆಯೇ ಹೇಳಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಡಿಮೆ ಮಾಡಿವೆ. ದೇಶಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಹುತೇಕ ಕಡೆ ಸರ್ಕಾರದ ವಿರುದ್ಧ ಜನ ಮತದಾನ ಮಾಡಿದ್ದಾರೆ. ನಾವು ಕೂಡ ಈ ಚುನಾವಣೆ ಮೂಲಕ ಸಂದೇಶ ರವಾನಿಸಬೇಕು, ಎಚ್ಚರಿಕೆ ನೀಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡಿದ್ದೆವು. ಅದರಂತೆ ಪ್ರಬುದ್ಧ ಮತದಾರರು ಮತ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೆ ಮಾಲೀಕರು ಅನ್ನೋದು ಮತ್ತೆ ಸಾಬೀತಾಗಿದೆ. ಹೀಗಾಗಿಯೇ ಇಂಧನ ದರ ಕಡಿಮೆ ಆಗಿದೆ ಎಂದು ಡಿಕೆಶಿ ವ್ಯಾಖ್ಯಾನಿಸಿದರು.
ಅಡುಗೆ ಅನಿಲ ಸೇರಿ ಎಲ್ಲ ವಸ್ತುಗಳ ಬೆಲೆ ಇಳಿಕೆ ಆಗುವವರೆಗೂ ಕಾಂಗ್ರೆಸ್ ಇದೇ 14 ರಿಂದ ದೇಶದೆಲ್ಲೆಡೆ ಜನರಲ್ಲಿ ಜಾಗೃತಿ ಮೂಡಿಸುವ ಹೋರಾಟ ಮುಂದುವರಿಸುತ್ತದೆ. ಈ ಹೋರಾಟ ಇಲ್ಲಿಗೇ ನಿಲ್ಲಬಾರದು. ಯುವಕರಿಗೆ ಉದ್ಯೋಗ ಸಿಗಬೇಕು. ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಕಬ್ಬಿಣ, ಸೀಮೆಂಟ್ ದಿನಬಳಕೆ ವಸ್ತುಗಳ ಬೆಲೆಯೂ ಇಳಿಯಬೇಕು. ಇಂಧನ ಬೆಲೆ ಇಳಿಸಿದ ಸರ್ಕಾರದ ತೀರ್ಮಾನ ಸ್ವಾಗತಿಸುತ್ತೇವೆ. ಆದರೆ ತೆರಿಗೆ ಹೆಸರಲ್ಲಿ ಲೂಟಿ ಮಾಡಿರುವ ಹಣ ಜನರಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಬೇಕು. ಜನ ಈ ಆಡಳಿತ ವಿರುದ್ಧ ಬೇಸತ್ತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ ಎಂದರು.
ಕಲ್ಲಿದ್ದಲು ಕೊರತೆ ವಿಚಾರದಲ್ಲಿ ಸರ್ಕಾರದ ಕಾರ್ಯಸೂಚಿ ಏನು?:
ಇನ್ನು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಬಂಡವಾಳ ಹೂಡಿಕೆದಾರರು ಬರುವುದಿಲ್ಲ. ಮುಂದೆ ಉದ್ಯೋಗ ಮತ್ತಷ್ಟು ನಷ್ಟವಾಗುವ ಸಾಧ್ಯತೆ ಇದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ 7 ರಂದು ನಮ್ಮ ನಾಯಕರ ಜತೆ ಚರ್ಚೆ ಮಾಡಿ ಕಾರ್ಯಕ್ರಮದ ವಿವರ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯಕ್ಕೆ ಒಂದು ದಿನಕ್ಕೆ ಮಾತ್ರ ಸಾಕಾಗುವ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಸದ್ಯಕ್ಕೆ ಹೆಚ್ಚು ಮಳೆ ಇರುವುದರಿಂದ ಪರಿಸರ ಕೈ ಹಿಡಿದಿದೆ.
ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಗೆ ಸರ್ಕಾರದ ಕಾರ್ಯಸೂಚಿ ಏನು? ಎಂದು ತಿಳಿಸಬೇಕು. ಕಲ್ಲಿದ್ದಲು ಮಂತ್ರಿ ನಮ್ಮವರೇ ಇದ್ದಾರೆ. ಹಿಂದೆ ಹೈಕೋರ್ಟ್ ತೀರ್ಪು ಪ್ರಕಾರ ಕಲ್ಲಿದ್ದಲು ಬಳಸಿಕೊಳ್ಳಲು ಮುಂದಾದಾಗ ನಮ್ಮ ಸರ್ಕಾರಕ್ಕೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ, ಅದನ್ನು ತಪ್ಪಿಸಲು ಆಗಿನ ಕೇಂದ್ರ ಸಚಿವರು ಅನುಮತಿ ನೀಡಿರಲಿಲ್ಲ. ಬದಲಿಗೆ ನಮಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಈಗ ಅವರದೇ ಸರ್ಕಾರ ಇದೆ ಎಂದು ಅನುಮತಿ ನೀಡಿದ್ದಾರೆ. ಈಗ ಕೆಲಸ ಶುರು ಆಗಿದೆ ಎಂದು ಹೇಳುತ್ತಿದ್ದಾರೆ.’
ಪ್ರಹ್ಲಾದ್ ಜೋಷಿ ಅವರು ರಾಜ್ಯಕ್ಕೆ ನಿತ್ಯ 24 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಸಲಾಗುತ್ತಿದೆ ಎಂದು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರು ಹೇಳಿರುವ ಕಲ್ಲಿದ್ದಲು ಇನ್ನೂ ರಸ್ತೆಯಲ್ಲಿಯೇ ಬರುತ್ತಿದೆ. ಬಳ್ಳಾರಿ, ರಾಯಚೂರಿಗೆ ಹೋಗಿ, ಅಲ್ಲೆಲ್ಲ ಎಷ್ಟು ಯುನಿಟ್ ವಿದ್ಯುತ್ ಸಾಮರ್ಥ್ಯ ಇದೆ, ಎಷ್ಟು ಉತ್ಪಾದನೆ ಆಗುತ್ತಿದೆ, ಎಷ್ಟು ಘಟಕಗಳು ಕಾರ್ಯ ಮಾಡುತ್ತಿವೆ ಎಂದು ನೋಡಿ.’ ಬೊಮ್ಮಾಯಿ ಅವರ ಆಡಳಿತ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನೆ ಪುಸ್ತಕ ಬಿಡುಗಡೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಳ್ಳೆಯ ಜಾಹೀರಾತು ನೀಡಲಿ. ಅವರ ಸಾಧನೆ ನೋಡಿ ಅವರದೇ ಜಿಲ್ಲೆ ಜನ ಉಪಚುನಾವಣೆಯಲ್ಲಿ ತೀರ್ಪು ಕೊಟ್ಟಿದ್ದಾರೆ. ಅವರ ಸಾಧನೆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ನಾವು ಅವರ ಆಡಳಿತದ ಬಗ್ಗೆ ದೂರುತ್ತಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಲ್ಲ. ಅವರ ನಾಯಕತ್ವದಲ್ಲಿಯೇ ಚುನಾವಣೆ ಮಾಡಬೇಕು ಎಂದು ಹೇಳಿದ್ದಾರೆ. ಅದು ಅವರ ಇಚ್ಛೆ. ವ್ಯಕ್ತಿ ಮೇಲೆ ಪಕ್ಷ ಇಲ್ಲ, ಪಕ್ಷದ ಮೇಲೆ ಸರ್ಕಾರ ಇದೆ’ ಎಂದು ವಾಗ್ದಾಳಿ ನಡೆಸಿದರು.
‘ಇಂಧನ ಬೆಲೆ ಇಳಿಕೆ ದೀಪಾವಳಿ ಉಡುಗೊರೆ ಎನ್ನುತ್ತಿದ್ದಾರೆ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ’10 ರೂ ಇರುವುದನ್ನು 5 ರೂ. ಮಾಡಿದಾಗ ಉಡುಗೊರೆ ಆಗುತ್ತದೆ. ಆದರೆ 40 ರೂ. ಕಿತ್ತುಕೊಂಡು ಈಗ 7 ರೂ. ಕೊಟ್ಟರೆ ಅದು ಉಡುಗೊರೆ ಹೇಗಾಗುತ್ತದೆ? ನಿಮಗೆ 20 ಸಾವಿರ ಸಂಬಳ ಇದ್ದಾಗ 25 ಸಾವಿರ ಕೊಟ್ಟರೆ ಅದು ಉಡುಗೊರೆ. 15 ಸಾವಿರ ಕಿತ್ತುಕೊಂಡು 5 ಸಾವಿರ ಕೊಟ್ಟರೆ ಅದು ಉಡುಗೊರೆನಾ? 50-60 ರೂ. ಇರಬೇಕಾದ ಇಂಧನ ಬೆಲೆ ಈಗ ಎಷ್ಟಿದೆ? ಇಷ್ಟು ದಿನ ಪಿಕ್ ಪಾಕೆಟ್ ಮಾಡಿದ್ದಾರೆ. ನೀವು ಸ್ಕೂಟರ್, ಕಾರ್ ಯಾವುದಾದರೂ ಸರಿ. ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ನರಸಿಂಹರಾವ್, ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ಈಗಿನವರ ಅವಧಿಯಲ್ಲಿ ಕಚ್ಚಾತೈಲ ಬೆಲೆ ಎಷ್ಟಿತ್ತು, ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಾಳೆ ಮಾಡಿ ನೋಡಿ. ಕಚ್ಚಾತೈಲ ಬೆಲೆ ಇಳಿದಾಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರಾ?’ ಎಂದು ಕೇಳಿದರು.
ಸಿ.ಪಿ. ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಧ್ಯಕ್ಷನಾಗಿ ನಾನು ಒಂದು ಹೆಸರು ಹೇಳಲು ಸಾಧ್ಯವಿಲ್ಲ. ಕೆಲವರು ಸುದ್ದಿ ಹರಿಯಬಿಟ್ಟು ತಮ್ಮ ಮಾರುಕಟ್ಟೆ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ನೀವು ನಿಮ್ಮ ಸಂಸ್ಥೆಯಿಂದ ಬೇರೆ ಸಂಸ್ಥೆಗೆ ಹೋಗುತ್ತೀರಾ ಎಂದಾದಾಗ, ನಿಮ್ಮನ್ನು ಕರೆದು ಸಂಬಳ ಹೆಚ್ಚಿಸುತ್ತಾರಲ್ಲಾ ಹಾಗೆ. ಅವರು ಬೆದರಿಕೆ ಹಾಕಿ ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಹಿಂದೆ ಪರೀಕ್ಷೆ ಬರೆದಿದ್ದೇವೆ ಎಂದು ಹೇಳಿದ್ದು ಮಾತ್ರ ಗೊತ್ತಿದೆ. ಅವರು ಪಾಸಾಗಿದ್ದಾರೋ, ಇಲ್ಲವೋ ಅವರನ್ನೇ ಕೇಳಿ.’ ಎಂದು ಚಟಾಕಿ ಹಾರಿಸಿದರು.
ವಲಸಿಗರು ಬರುವುದರಿಂದ ಪಕ್ಷದಲ್ಲಿ ಮೂಲ ಕಾಂಗ್ರೆಸಿಗರಿಗೆ ಬೆಂಬಲ ಸಿಗುತ್ತಿಲ್ಲ, ಇದರಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ನಮ್ಮ ಪಕ್ಷ, ಸಿದ್ಧಾಂತ, ನಾಯಕತ್ವ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಮನಗೂಳಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವಾಗ ಜಿಲ್ಲೆಯ ಎಲ್ಲ ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ಯಾವ ಅಸಮಾಧಾನವೂ ಇರಲಿಲ್ಲ. ಮತದಾರನ ತೀರ್ಪನ್ನು ನಾವು ಸ್ವಾಗತಿಸಿದ್ದೇವೆ. ಹಾನಗಲ್ ನಲ್ಲಿ ಅಭ್ಯರ್ಥಿ ಆಗಬಯಸಿದ್ದವರ ಹೆಸರು ಕೇಳಿದರೆ ನಿಮಗೆ ಶಾಕ್ ಆಗುತ್ತದೆ. ಬಿಜೆಪಿಯವರ ಹೆಸರೂ ಇತ್ತು. ಅದನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗುವುದಿಲ್ಲ. ನಾವು ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ಕಾರ್ಯಕರ್ತರು, ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿಯವರು 25, 40 ಜನರನ್ನು ಕರೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ಅವರು ಬೇಕಾದರೆ 62 ಜನರನ್ನೂ ಕರೆದುಕೊಂಡು ಹೋಗಲಿ. ನಮಗೆ ಇರುವವರೆ ಸಾಕು. ಕೆಲವರು ಬರುವವರಿದ್ದಾರೆ. ಅದರಲ್ಲಿ ನನಗೆ ಆಗದವರು ಇರಬಹುದು, ಬೇರೆಯವರಿಗೆ ಆಗದಿರುವವರು ಇರಬಹುದು’ ಎಂದರು.
‘ಬೇರೆಯವರು ಬಂದಾಗ ಮೂಲ ಕಾಂಗ್ರೆಸ್ಸಿಗರು ಟಿಕೆಟ್ ವಂಚಿತರಾದರೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದು ಕುರ್ಚಿ ಖಾಲಿ ಇದ್ದಾಗ 4 ಜನ ಕಣ್ಣು ಹಾಕುತ್ತಾರೆ. ಎಲ್ಲರೂ ತೃಪ್ತಿಯಾಗಿ ಹೋಗುವುದಿಲ್ಲ. 13 ಜನ ರೆಬಲ್ ಅಭ್ಯರ್ಥಿಗಳಿದ್ದರೂ ಅಧಿಕಾರ ಇದ್ದಿದ್ದರ ಪರಿಣಾಮ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರು. ಅವರು ಮುಂದೆ ಏನಾಗುತ್ತಾರೆ ಎಂದು ಕಾಯ್ದು ನೋಡಿ’ ಎಂದರು.