ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಮನೆಯೂ ಕೆಡವಿದ ಅಧಿಕಾರಿಗಳು!

Prasthutha: May 14, 2022

►ಐದು ಬಾರಿ ಜಿಯೋ ಟ್ಯಾಗಿಂಗ್, ವಾರದ ಹಿಂದೆಯಷ್ಟೇ ಪಿಎಂಎವೈಯಡಿ ಹಣ ಬಿಡುಗಡೆಯಾಗಿದ್ದ ಮನೆ

ಖಾರ್ಗೋನ್: ಮನೆಗೆ ಐದು ಬಾರಿ ಜಿಯೋ ಟ್ಯಾಗಿಂಗ್ ಆಗಿದ್ದರೂ ಮತ್ತು ವಾರದ ಹಿಂದೆಯಷ್ಟೇ ಪ್ರಧಾನಮಂತ್ರಿ ಆವಾಸ್ ಯೋಜನೆ- ಪಿಎಂಎವೈಯಡಿ ಹಣ ಬಿಡುಗಡೆಯಾಗಿದ್ದರೂ ಅಧಿಕಾರಿಗಳು ಅಕ್ರಮ ಮನೆ ಎಂಬ ನೆಪವೊಡ್ಡಿ ಮನೆ ತೆರವುಗೊಳಿಸಿರುವುದು ಖಾರ್ಗೋನ್ ನಲ್ಲಿ ನಡೆದಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ಅರ್ಜಿ ಹಾಕಿದ್ದ ಹಸೀನಾ ಫಕ್ರೂ ಅವರಿಗೆ ಮನೆ ನಿರ್ಮಿಸಲು ಅನುಮೋದನೆ ಸಿಕ್ಕಿತ್ತು.  ಆದರೂ ಈ ಯೋಜನೆಯಡಿ ನಿರ್ಮಿಸಿದ ಮನೆಯನ್ನು ಕೂಡ ಕೆಡವಿರುವುದು ಇದೀದ ವಿವಾದ ಸೃಷ್ಟಿಸಿದೆ.

ಹಸೀನಾಳ ಮನೆಯು 5 ಬಾರಿ ಜಿಯೋ ಟ್ಯಾಗ್ ಆಗಿತ್ತು. ಹಸೀನಾ ತಾಯಿ ಮತ್ತು ಮಗ, 2.5 ಲಕ್ಷ ರೂ.ಕಂತಿನಲ್ಲಿ ಬ್ಯಾಂಕಿಗೆ ಕಟ್ಟಿದ ದಾಖಲೆಯನ್ನು ತೋರಿಸಿದರು.

ಇಷ್ಟಾದರೂ ಬಳಿಕ ಜಿಲ್ಲಾಧಿಕಾರಿ, ಈ ಮನೆ ಅಕ್ರಮ ಎಂದು ನೋಟಿಸ್ ನೀಡಿದರು ಎಂದು ಹಸೀನಾ ಆರೋಪಿಸಿದ್ದಾರೆ.

“ನಮ್ಮ ನಿಲುವು ಸ್ಪಷ್ಟವಿದೆ. ಇದು ಸರಕಾರಿ ಜಮೀನಿನ ಒತ್ತುವರಿ. ನಾವು ದಾಖಲೆಗಳಂತೆ ಕಾರ್ಯವೆಸಗಿ, ಅವುಗಳನ್ನೆಲ್ಲ ಕಿತ್ತು ಹಾಕಿದ್ದೇವೆ’ ಎಂದು ಹೇಳುತ್ತಾರೆ ಖರ್ಗೋನ್ ಜಿಲ್ಲಾಧಿಕಾರಿ ಅನುಗ್ರಹ ಪಿ.

ಏಪ್ರಿಲ್ 11ರಂದು ಆ ಮನೆಯ ಮೇಲೆ ಬುಲ್ಡೋಜರ್ ಹರಿದಾಗ ಅವರಲ್ಲಿ ಭೂದಾಖಲೆ, ಬ್ಯಾಂಕು ದಾಖಲೆ, ತಹಶೀಲ್ದಾರ್ ಆದೇಶ ಎಲ್ಲವೂ ಇತ್ತು. 2 ಲಕ್ಷ ರೂ.ಬ್ಯಾಂಕಿಗೆ ಕಟ್ಟಿದ ಮೇಲೆ, ಪಿಎಂಎವೈ ಬಗೆಗೆ ನಾಲ್ಕು ಕಂತು ಸಲ್ಲಿಕೆಯ ಬಳಿಕ ನಗರ್ ತಹಶೀಲ್ದಾರರು ಹಸೀನಾರಿಗೆ ಒತ್ತುವರಿ ಜಾಗ ಎಂದು ನೋಟೀಸು ನೀಡಿದ್ದಾರೆ.

ಮಾರ್ಚ್ 10ರಂದು ಅಕ್ರಮ ನಿರ್ಮಾಣ ಎಂದು ತಹಶೀಲ್ದಾರ್ ಕೋರ್ಟು ಹೇಳಿದಾಗ ಹಸೀನಾ ಅದನ್ನು ನಿರಾಕರಿಸಿದ್ದರು. ಪಿಎಂಎವೈ ಕೊನೆಯ ಕಂತು ರೂ. 50,000 ಹಸೀನಾರ ಖಾತೆಗೆ ಏಪ್ರಿಲ್ 7ರಂದು ಜಮಾ ಆಗಿದ್ದು, ಅದಾದ ನಾಲ್ಕೇ ದಿನಕ್ಕೆ ಅವರ ಮನೆ ಡೆಮಾಲಿಶ್ ಮಾಡಲಾಗಿದೆ.

ಆಕೆ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತರಲೂ ಅವಕಾಶ ನೀಡದೆ ಉರುಳಿಸಲಾಗಿದೆ.

ನೆರೆಯ ಸ್ಥಳವೊಂದರಲ್ಲಿ ಕೋಮು ಗಲಭೆಯಾದ ಮರುದಿನ ಹಸೀನಾರ ಮನೆ ಉರುಳಿಸಲಾಗಿದೆ. ಅದು ಕಾಕತಾಳೀಯ ಎನ್ನುತ್ತಾರೆ ಅಧಿಕಾರಿಗಳು. ಇಲ್ಲೇ ಇನ್ನೊಂದು ಪ್ರಧಾನಿ ಆವಾಸ್ ಮನೆಗೆ ಹಾನಿ ಮಾಡಲಾಗಿದೆ. ಅದು ಲೀಲಾ ಬಾಯಿ ಚಗನ್ ಲಾಲ್ ಎಂಬವರಿಗೆ ಸೇರಿದೆ. ಈಗ ಡೆಮಾಲಿಶನ್ ಮೊಕದ್ದಮೆ ಸುಪ್ರೀಂ ಕೋರ್ಟಿನಲ್ಲಿದೆ.

ಇಸ್ರೋ- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಿರ್ವಹಿಸುವ ಭುವನ್ ಎಚ್ ಎಫ್ ಎ- ಎಲ್ಲರಿಗೂ ಮನೆ ಯೋಜನೆಯಡಿ ಹಸೀನಾರ ಮನೆ 5 ಬಾರಿ ಜಿಯೋ ಟ್ಯಾಗ್ ಆಗಿದೆ. ಆ ಬಗ್ಗೆ ಫೋಟೋ ವರದಿಗಳೂ ಪತ್ರಿಕೆಗಳಲ್ಲಿ ಬಂದಿವೆ.

ಹಸೀನಾಳ ಮನೆಗೆ ಮೊದಲ ಜಿಯೋ ಟ್ಯಾಗ್ 2020ರ ಜುಲೈ 22ರಂದು ಆಗಿದೆ. ಹಸೀನಾ ಮತ್ತವರ ಮಗ ಖರ್ಗೋನ್ ನ ಕಸ್ಕಸ್ ವಾಡಿಯ 7 ಸಂಖ್ಯೆಯ ಸೀಟು ಗುಡಿಸಲು ಎದುರು ನಿಂತಿರುವ ಫೋಟೋ ಭುವನ್ ಆಪ್ ನಲ್ಲಿ ಅಪ್ಲೋಡ್ ಆಗಿದೆ. ಮೂಲ ಕಚ್ಚಾ ಮನೆ ಎಂದು ಬರೆಯಲಾಗಿದೆ.

2021ರ ಜನವರಿ 24ರಂದು ಎರಡನೆಯ ಬಾರಿ ಜಿಯೋ ಟ್ಯಾಗ್ ಆದಾಗ ತಳಪಾಯ, ಎದುರು ಗೋಡೆಗೆ ಬಾಗಿಲು, ಕಿಟಕಿ ತಂದಿರುವ ಫೋಟೋ ಹಾಕಲಾಗಿದೆ.

2021ರ ಜನವರಿ 27ರಂದು 3ನೇ ಬಾರಿ ಜಿಯೋ ಟ್ಯಾಗ್ ಆಗಿದ್ದು ಕಟ್ಟಡವು ತಾರಸಿವರೆಗೆ ಬಂದ ಫೋಟೋ ಇದೆ.

ತಾರಸಿ ಆದ ಮೇಲೆ 2021ರ ಮೇ 10ರಂದು ನಾಲ್ಕನೆಯ ಜಿಯೋ ಟ್ಯಾಗ್ ಆಗಿದೆ. ಕಟ್ಟಡ ಸಾಮಗ್ರಿ ಇರುವಂತೆ ಹಸೀನಾರು ಮನೆಯೆದುರು ನಿಂತಿರುವ ಫೋಟೋವನ್ನು ಸಂಸ್ಥೆ ಅಪ್ಲೋಡ್ ಮಾಡಿದೆ.  2019- 20ರಲ್ಲಿ ಎರಡೂವರೆ ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಲು ಪರವಾನಿಗೆ ಆಗಿತ್ತು.

ಹಸೀನಾರ ಖಾತೆಗೆ 2020ರ ಅಕ್ಟೋಬರ್ 28ರಂದು 1 ಲಕ್ಷ, 2021ರ ಮಾರ್ಚ್ 31ರಂದು 1 ಲಕ್ಷ, 2022ರ ಏಪ್ರಿಲ್ 7ರಂದು 50,000 ರೂಪಾಯಿ ಹಣ ಜಮಾ ಆಗಿತ್ತು. 2021ರ ಜನವರಿ 24ರಿಂದ 2021ರ ಮೇ 10ರ ನಡುವೆ ಹೊಸ ಮನೆಗೆ ವಿದ್ಯುತ್, ಶೌಚ ಇತ್ಯಾದಿಗೆ ಅನುಮತಿ ನೀಡಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಎಂದು ಮೀಸಲಾದ ಖರ್ಗೋನ್ ನ 1,480 ವಾಸದ ಘಟಕದಲ್ಲಿ ಹಸೀನಾರ ಮನೆ ಕಟ್ಟಲಾಗಿದೆ.

ಈ ಯೋಜನೆಯ ಅನುಕೂಲ ಪಡೆಯುವವರು ಜಾಗದ ಪಟ್ಟಾ ಹೊಂದಿರಬೇಕು. ಖರ್ಗೋನ್ ನಗರ ಪಾಲಿಕೆಯು ಹಸೀನಾರಿಗೆ ತೆರಿಗೆ ರಶೀದಿ ನೀಡಿ ಇಲ್ಲಿ ಮನೆ ಕಟ್ಟಲು ಪರವಾನಿಗೆ ನೀಡಿತ್ತು.

ಕೇಂದ್ರ ಸರಕಾರವು ರಾಜ್ಯಗಳಿಗೆ ಈ ಬಗ್ಗೆ ಕಳುಹಿಸಿದ ಸುತ್ತೋಲೆಯ 7, 8 ಪ್ಯಾರಾದಲ್ಲಿ ಇರುವಂತೆ, ಜಿಯೋ ಟ್ಯಾಗಿಂಗ್ ಮೇಲುಸ್ತುವಾರಿ ಅಗತ್ಯ. ಹಸೀನಾರ ಮನೆಯನ್ನು ಈ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಕಟ್ಟಲಾಗಿತ್ತು. ಅವರು ಮನೆ ಪಡೆಯಲು ಅರ್ಹರು ಎಂದೂ ಹೇಳಲಾಗಿತ್ತು.

ಖರ್ಗೋನ್ ನಗರಪಾಲಿಕೆಯವರು ಜಿಯೋ ಟ್ಯಾಗಿಂಗನ್ನು ಮೂರನೆಯ ಪಕ್ಷದವರು ಮಾಡಿರುತ್ತಾರೆ. ಅವರು ಬೇರೆ ಮಾಹಿತಿಗಳನ್ನು ನೀಡುವುದಿಲ್ಲ.

2021ರ ಸೆಪ್ಟಂಬರ್ 17ರಂದು ಬಹುಪಾಲು ಎಲ್ಲ ಮುಗಿವ ಹಂತದಲ್ಲಿ ಖರ್ಗೋನ್ ನಗರ ತಹಶೀಲ್ದಾರ್   ಹಸೀನಾರಿಗೆ ನೋಟೀಸು ನೀಡಿದ್ದಾರೆ.

ನೋಟಿಸ್ ನಲ್ಲಿ, ಖಸ್ರಾ ನಂಬರ್ 379ರಲ್ಲಿ ಈ ಕುಟುಂಬವು ಸರಕಾರದ 900 ಚದರ ಅಡಿ ಜಾಗ ಆಕ್ರಮಿಸಿದ್ದು 12X30 ಪಕ್ಕಾ ಮನೆ, 18X30 ಕಚ್ಚಾ ಮನೆ ಕಟ್ಟಿದೆ ಎಂದು ತಿಳಿಸಲಾಗಿದೆ.

2021ರ ಸೆಪ್ಟೆಂಬರ್ 28ರಂದು ಹಸೀನಾರು ಇದಕ್ಕೆ ಉತ್ತರಿಸುತ್ತ, ಈ ಜಾಗವು ನನ್ನ ಗಂಡನ ಹೆಸರಿಗೆ ಒಪ್ಪಿತವಾಗಿದ್ದು, ವಿಧವೆಯಾಗಿರುವ ನನಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಪರವಾನಿಗೆ ಆಗಿದೆ. ನಮ್ಮ ಕುಟುಂಬಕ್ಕೆ ಬೇರೆ ಯಾವುದೇ ಮನೆ, ಭೂಮಿ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

2022ರ ಮಾರ್ಚ್ 10ರಂದು ತಹಶೀಲ್ದಾರ್ ಕೋರ್ಟು, ನೀವು ಜಾಗ ಅತಿಕ್ರಮಿಸಿರುವುದನ್ನು ತೆರವು ಮಾಡುವಂತೆ ಆಜ್ಞಾಪಿಸಲಾಗಿದೆ ಎಂದು 2020ರ ಏಪ್ರಿಲ್ 7ರಂದು ತಹಶೀಲ್ದಾರರಿಂದ ಹಸೀನಾರಿಗೆ ನೋಟೀಸು ಬಂದಿದೆ. ಅಧಿಕೃತ ಪರವಾನಿಗೆ ಪಡೆಯದೆ ಕಟ್ಟಲಾಗಿದೆ ಎಂದೂ ಅದರಲ್ಲಿ ತಿಳಿಸಲಾಗಿತ್ತು.

ಮಾರ್ಚ್ 10ರ ಕೋರ್ಟು ಆದೇಶ ಪ್ರತಿ ನಮಗೆ ಸಿಕ್ಕಿಲ್ಲ ಎಂದು ಹಸೀನಾ ಮತ್ತು ಮಗ ಹೇಳುತ್ತಾರೆ. ಅಧಿಕಾರಿಗಳು ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ.

ಏಪ್ರಿಲ್ 7ರಂದು 3 ದಿನದೊಳಗೆ ಒತ್ತುವರಿ ತೆರವು ಮಾಡುವಂತೆ ಗಡು ನೀಡಿದ ನೋಟೀಸು ಸಹ ನೀಡಲಾಯಿತು.

ನಾವು ಅಲ್ಲಿ ಒಂದು ಕಚ್ಚಾ ಮನೆ ಹೊಂದಿದ್ದು, ಅದರಲ್ಲಿ ನಾನು 40 ವರುಷಗಳಿಂದ ವಾಸಿಸುತ್ತಿದ್ದೇನೆ. ಅದರ ಮೇಲೆ ಪಿಎಂಎವೈ ಅಡಿ ನನಗೆ ಮನೆ ಅನುಮತಿ ಆಗಿದೆ. ಆದ್ದರಿಂದ ಈ ಮನೆಯಿಂದ ನಮ್ಮನ್ನು ಹೊರಗೆ ಹಾಕಬಾರದು ಎಂದು ಹಸೀನಾ ಏಪ್ರಿಲ್ 9ರಂದು ಉತ್ತರ ನೀಡಿದರು.

ಇಲ್ಲಿಂದ 1 ಕಿಮೀ ದೂರದಲ್ಲಿ ಏಪ್ರಿಲ್ 10ರಂದು ರಾಮ ನವಮಿ ದಿನ ಕೋಮು ಗಲಭೆ ನಡೆದಿತ್ತು. ಮರುದಿನವೇ ನಗರಾಡಳಿತದ ಪರ ಹಸೀನಾ ಮತ್ತು ಡಜನ್ ಗೂ ಹೆಚ್ಚು ಜನರ ಮನೆಗಳನ್ನು ಬುಲ್ಡೋಜ್ ಮಾಡಲಾಗಿದೆ.

“ಮನೆ ಉರುಳಿಸುವುದಾದರೆ ಅವರು ಮನೆ ಕಟ್ಟಲು ಪರವಾನಿಗೆ ಯಾಕೆ ಕೊಟ್ಟರು?” ಎಂದು ಪ್ರಶ್ನಿಸುತ್ತಾರೆ ಹಸೀನಾ.

ಪಿಎಂಎವೈ ಮನೆ ಬೇರೆ ವಿಳಾಸದಲ್ಲಿ ಪರವಾನಿಗೆ ಪಡೆದಿತ್ತು ಎನ್ನುವ ಅಧಿಕಾರಿಗಳು ಅದರ ದಾಖಲೆ ನೀಡಲು ವಿಫಲರಾಗಿದ್ದಾರೆ.

ಬಿರ್ಲಾ ಮಾರ್ಗದ ಖಾರ್ಸಾ 379 ಮತ್ತು ಕಸ್ಕಸ್ ವಾಡಿ ಮೊಹಲ್ಲಾ ವಾರ್ಡ್ ನಂಬರ್ 11 ಎಂಬುದು ಒಂದೇ ಆಗಿದ್ದು ಕ್ರಮವಾಗಿ ಹೊಸ ಮತ್ತು ಹಳೆಯ ಹೆಸರುಗಳಾಗಿವೆ ಎನ್ನುತ್ತಾರೆ ತಾಯಿ ಮಗ.

ರಾಷ್ಟ್ರೀಯ ಪರಿವಾರ್ ಸಹಾಯತ ಯೋಜನೆಯಡಿ ಕುಟುಂಬದ ಪ್ರಧಾನ ದುಡಿಮೆಗಾರ ಸತ್ತಾಗ ನೀಡುವ ರೂ. 20,000ಕ್ಕೆ 2020 ನವೆಂಬರ್ ನ ಇನ್ನೊಂದು ಅರ್ಜಿಯಲ್ಲಿ ವಿಳಾಸವು ರಸ್ತೆ ಸಂಖ್ಯೆ 6, ಕಸ್ಕರ್ ವಾಡಿ, ವಾರ್ಡ್ ನಂಬರ್ 11 ಎಂದಿದೆ. ಅವೆಲ್ಲ ಒಂದೇ ಜಾಗವಾಗಿದ್ದು ಕಸ್ಕರ್ ವಾಡಿಯಲ್ಲಿ 6ನೇ ರಸ್ತೆಯೇ ಇಲ್ಲವೆಂಬುದು ತಿಳಿದು ಬಂದಿದೆ.

ಒಟ್ಟಾರೆ ಅತಿ ಹಿಂದುಳಿದ ಸ್ಲಂ ಮಾದರಿಯ ಪ್ರದೇಶದ ವಿಳಾಸ ಗೋಜಲು ಸಹ ಇದರಲ್ಲಿ ಸೇರಿಕೊಂಡಿದೆ. ಒಟ್ಟಾರೆ ಪ್ರಧಾನ ಮಂತ್ರಿ ಆವಾಸ ಯೋಜನೆಯ ಮನೆಯನ್ನು ಕಟ್ಟಿದರು, ಒಡೆದರು ಎಂಬುದೇ ಸಾಧನೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!