Home ಟಾಪ್ ಸುದ್ದಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಡತಗಳನ್ನು ಅಧಿಕಾರಿಗಳು ಕದ್ದೊಯ್ದಿದ್ದಾರೆ: ಶಾಸಕ ಶ್ರೀವತ್ಸ ಗಂಭೀರ ಆರೋಪ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಡತಗಳನ್ನು ಅಧಿಕಾರಿಗಳು ಕದ್ದೊಯ್ದಿದ್ದಾರೆ: ಶಾಸಕ ಶ್ರೀವತ್ಸ ಗಂಭೀರ ಆರೋಪ

ಮೈಸೂರು: ವಿಚಾರಣೆ ನೆಪದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಡತಗಳನ್ನು ಹಿರಿಯ ಅಧಿಕಾರಿಗಳು ಕದ್ದೊಯ್ದಿದ್ದಾರೆ ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣ ಬೆಳಕಿಗೆ ಬರುತ್ತಿದ್ದಂತೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ತಂಡ ಏಕಾಏಕಿ ಮೈಸೂರಿಗೆ ಆಗಮಿಸಿದೆ. ದಿನವಿಡೀ ಮುಡಾ ಅಧಿಕಾರಿಗಳನ್ನು ವಿಚಾರಣೆ ನಡೆಸಿದ ಅಧಿಕಾರಿಗಳು, 140ಕ್ಕೂ ಹೆಚ್ಚು ಕಡತಗಳನ್ನು ಕದ್ದೊಯ್ದಿದ್ದಾರೆ ಎಂದಿದ್ದಾರೆ.

ಆ ಕಡತಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಜತೆಗೆ ಕೆಲವು ದಾಖಲೆಗಳನ್ನು ನಾಶ ಪಡಿಸಲಾಗುತ್ತಿದೆ. ಇದು ಸರಕಾರದಿಂದಲೇ ನಡೆಯುತ್ತಿದೆ. ಮೊದಲ ದಿನ 140 ಕಡತಗಳನ್ನು ತೆಗೆದುಕೊಂಡು ಹೋಗಿದ್ದೇವೆ ಎಂದು ಅಧಿಕಾರಿಗಳೇ ಹೇಳಿದ್ದರು. ಅನಂತರ 40 ಕಡತಗಳನ್ನಷ್ಟೇ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಬರುತ್ತಿದೆ ಎಂದರು.

ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ವಿಚಾರದಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಹಗರಣದ ಕುರಿತು ರಾಜ್ಯಪಾಲರು ಹಾಗೂ ಹೈಕೋರ್ಟ್‌ ನ್ಯಾಯಾಧೀಶರಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಶ್ರೀವತ್ಸ ತಿಳಿಸಿದರು.

ಯಾರನ್ನೋ ಬಚಾವ್‌ ಮಾಡಲು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಯಾರನ್ನೋ ರಕ್ಷಣೆ ಮಾಡಲು ಹೋಗಿ ಬುಡಕ್ಕೆ ತಂದುಕೊಳ್ಳುತ್ತಿದ್ದಾರೆ. ಅವರನ್ನು ಮುಂದಿಟ್ಟುಕೊಂಡು ಬೇರೆಯವರು ಪಾರಾಗಲು ಪ್ರಯತ್ನಿಸುತ್ತಿದ್ದಾರೆ ಎಂದೂ ಶ್ರೀವತ್ಸ ಹೇಳಿದ್ದಾರೆ.

Join Whatsapp
Exit mobile version