Home ಟಾಪ್ ಸುದ್ದಿಗಳು ಒಡಿಶಾ ರೈಲು ಅಪಘಾತದಲ್ಲಿ ಪಾರಾಗಿದ್ದ ಚಿಕ್ಕಮಗಳೂರು ಮೂಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಒಡಿಶಾ ರೈಲು ಅಪಘಾತದಲ್ಲಿ ಪಾರಾಗಿದ್ದ ಚಿಕ್ಕಮಗಳೂರು ಮೂಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಒಡಿಶಾದಲ್ಲಿ ನಡೆದ ರೈಲು ದುರಂತದ ಒಂದು ದೃಶ್ಯ

ಚಿಕ್ಕಮಗಳೂರು: ಜೂನ್ 2ರಂದು ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಜಾರ್ಖಂಡ್’ನ ಸಮೇದ್ ಶಿಖರ್ಜಿಗೆ ತೆರಳಿದ್ದ 110 ಜನರು ಪಾರಾಗಿ ಬಂದಿದ್ದರು. ಆದರೆ, ದುರಂತವೆಂಬಂತೆ ಅಪಘಾತದಲ್ಲಿ ಬದುಕುಳಿದಿದ್ದ ಚಿಕ್ಕಮಗಳೂರು ಮೂಲದ ವ್ಯಕ್ತಿ ಪ್ರಯಾಣದ ನಡುವೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

 ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ(61) ಮೃತ ವ್ಯಕ್ತಿ. ರೈಲು ಅಪಘಾತವಾದ ಬಳಿಕ ಯಾತ್ರಿಕರೆಲ್ಲರೂ ಜಾರ್ಖಂಡ್’ನ ಸಮೇದ್ ಶಿಖರ್ಜಿಗೆ ತೆರಳಿದ್ದರು. ಇದೀಗ ಅಲ್ಲಿಂದ ಹಿಂದಿರುಗುವಾಗ ಹೃದಯಾಘಾತ ಸಂಭವಿಸಿ ಧರ್ಮಪಾಲಯ್ಯ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಸಹ ಯಾತ್ರಿಕರು ಮೃತ ದೇಹಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹಂಗ ಬಜಾರ್ ಬಳಿ ಜೂನ್ 2ರ ರಾತ್ರಿ ಮೂರು ರೈಲುಗಳ ಮಧ್ಯೆ ಅಪಘಾತ ಸಂಭವಿಸಿ 290ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಭಾರತದ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಘೋರ ಘಟನೆಗಳಲ್ಲಿ ಇದೂ ಒಂದು ಪರಿಗಣಿಸಲಾಗಿದೆ. ಕೋಲ್ಕತಾದಿಂದ ಚೆನ್ನೈಗೆ ಬರುತ್ತಿದ್ದ ಕೋರಮಂಡಲ್ ಎಕ್ಸ್​ಪ್ರೆಸ್ ರೈಲು ತಪ್ಪಾದ ಸಿಗ್ನಲ್ ಕಾರಣದಿಂದ ಟ್ರ್ಯಾಕ್ ಬದಲಿಸಿತ್ತು. ಅಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ 12 ಬೋಗಿಗಳು ಹಳಿ ತಪ್ಪಿ ಪಕ್ಕದ ಟ್ರ್ಯಾಕ್​ಗೆ ಉರುಳಿವೆ. ಅತ್ತ, ಯಶವಂತಪುರದಿಂದ ಹೌರಾಗೆ ಹೋಗುತ್ತಿದ್ದ ಇನ್ನೊಂದು ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಈ ಎರಡು ಪ್ಯಾಸೆಂಜರ್ ರೈಲುಗಳಿಗೆ ಬಹಳ ಹಾನಿಯಾಗಿತ್ತು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಪ್ರಗತಿಯಲ್ಲಿದ್ದು, ಇನ್ನಷ್ಟು ವಿಚಾರಗಳು ಮತ್ತು ಲೋಪದೋಷಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

Join Whatsapp
Exit mobile version