Home ಟಾಪ್ ಸುದ್ದಿಗಳು ಆಂಧ್ರದ ಮಾನಸಿಕ ಅಸ್ವಸ್ಥನನ್ನು ಆರು ತಿಂಗಳು ಜೈಲಿನಟ್ಟಿದ್ದ ಒಡಿಶಾ ಪೊಲೀಸರು !

ಆಂಧ್ರದ ಮಾನಸಿಕ ಅಸ್ವಸ್ಥನನ್ನು ಆರು ತಿಂಗಳು ಜೈಲಿನಟ್ಟಿದ್ದ ಒಡಿಶಾ ಪೊಲೀಸರು !

ನವದೆಹಲಿ: ಆಂಧ್ರ ಪ್ರದೇಶದಲ್ಲಿ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಆಸ್ಪತ್ರೆಯಿಂದ ಓಡಿ ಹೋಗಿ ಪೊಲೀಸರ ಕೈಗೆ ಸಿಕ್ಕಿ ಒಡಿಶಾ ಸೆರೆಮನೆ ಸೇರಿ ಆರು ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.


27ರ ಹರೆಯದ ಯುವಕ ಎಸ್. ಪೈತಿ ರಾಜು ಅವರು ಮಾನಸಿಕ ಅಸ್ವಸ್ಥನಾಗಿದ್ದು, ಇದೀಗ ಮನೆಗೆ ಸೇರಿದ್ದಾನೆ.
ಕೆಲವು ಕಾಲದಿಂದ ಜೈಲಲ್ಲಿ ಇರುವ ಆತನ ಸ್ವಾಭಾವಿಕವಲ್ಲದ ನಡವಳಿಕೆಯನ್ನು ಯಾರೂ ಹೆಚ್ಚು ಗಮನಿಸಲಿಲ್ಲ. ಬಾಲಂಗೀರ್ ವಲಯ ಜೈಲಿನ ಸೂಪರಿನ್ ಟೆಂಡೆಂಟ್ ಅವರು ಈ ಯುವಕನ ವರ್ತನೆ ಗಮನಿಸಿ ತ್ವರಿತವಾಗಿ ಆತನನ್ನು ಬಿಡುಗಡೆ ಮಾಡುವಂತೆ ಆಜ್ಞಾಪಿಸಿದ್ದಾರೆ.


ಜನವರಿ 5, 2022ರಂದು ಬಾಲಂಗೀರ್ ಪೊಲೀಸರು ಎಟಿಎಂ ಕೋಣೆಯೊಳಗೆ ಮಲಗಿದ್ದ ರಾಜುವನ್ನು ಎಬ್ಬಿಸಿ ಠಾಣೆಗೆ ಕರೆತಂದಿದ್ದರು. ಆ ಸಮಯದಲ್ಲಿ ಜಿಲ್ಲಾ ಪೊಲೀಸರು ಹಲವು ಕಳ್ಳತನದ ಸಮಸ್ಯೆಯ ಸುಳಿಯಲ್ಲಿದ್ದರು. ತೆಲುಗು ಬಿಟ್ಟು ರಾಜುವಿಗೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಸ್ಥಳೀಯ ಪೊಲೀಸರು ಆತ ಹೇಳುವುದನ್ನು ಅನುವಾದಿಸುವ ಯಾರನ್ನೂ ಕರೆಸಲೂ ಇಲ್ಲ.
“ಯುವಕನ ಮೇಲೆ ಐಪಿಸಿ ಸೆಕ್ಷನ್ 379ರಡಿ ಮೊಕದ್ದಮೆ ದಾಖಲಿಸಿದರು. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು’ ಎಂದು ಬಾಧಿತನಿಗೆ ಎಸ್ ಡಿಸಿ- ರಾಜ್ಯ ರಕ್ಷಣಾ ವಕೀಲರಾಗಿ ನೇಮಕರಾಗಿರುವ ತುಶಾರ್ ಕಾಂತ್ ಮೊಹೋಪಾತ್ರ ತಿಳಿಸಿದ್ದಾರೆ.
“ಆ ಯುವಕನಿಗೆ ನನ್ನನ್ನು ಯಾಕೆ ಜೈಲಲ್ಲಿ ಇಟ್ಟಿದ್ದಾರೆ ಎನ್ನುವುದೇ ಗೊತ್ತಿಲ್ಲ. ಮೊದಲನೆಯದಾಗಿ ಆತ ಮನೋ ದುರ್ಬಲತೆಯವನಾಗಿದ್ದ; ಎರಡನೆಯದಾಗಿ ಆತನಿಗೆ ಮಾತನಾಡಲು ಸ್ಥಳೀಯ ಭಾಷೆ ಗೊತ್ತಿರಲಿಲ್ಲ. ಕೊನೆಗೂ ಬಾಲಂಗೀರ್ ಸೆರೆಮನೆಯವರು ಆತನ ಮನೋ ದೌರ್ಬಲ್ಯವನ್ನು ಗುರುತಿಸಿದರು. ಇತ್ತೀಚೆಗೆ ಗಂಜಾಂ ಜೈಲಿನಿಂದ ಮೂವರನ್ನು ಬಾಲಂಗೀರ್ ಜೈಲಿಗೆ ಹಾಕಲಾಗಿತ್ತು. ತೆಲುಗು ಬರುತ್ತಿದ್ದ ಅವರು ಆ ಯುವಕನ ಬಂಧನಕ್ಕೆ ಕಾರಣವಾದ ವಿಷಯವನ್ನು ತಿಳಿದುಕೊಂಡರು. ಬಾಲಂಗೀರ್ ಜೈಲು ಸೂಪರಿನ್ ಟೆಂಡೆಂಟರು ವಿಶಾಖಪಟ್ಟಣದ ಜೈಲು ಮೇಲಧಿಕಾರಿಗಳ ಸಹಾಯದಿಂದ ಯುವಕನ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ ಎಂದು ಮೊಹೋಪಾತ್ರ ಹೇಳಿದರು.


ಕೆಲವು ತಿಂಗಳುಗಳಿಂದ ಬಾರದ್ದರಿಂದ ರಾಜುವಿನ ಮನೆಯವರು ಆತನ ಅಂತ್ಯ ಕ್ರಿಯಾ ವಿಧಿಗಳನ್ನು ಕೂಡ ನೆರವೇರಿಸಿದ್ದರು.
“ಆರೋಪಿಯು ಬೇರೆ ರಾಜ್ಯದವನಾದ್ದರಿಂದ ಆತನ ಪರವಾಗಿ ವಾದಿಸಲು ಇಲ್ಲವೇ ಜಾಮೀನು ಕೊಡಿಸಲು ಅಲ್ಲಿನ ಯಾವ ವಕೀಲರೂ ಮುಂದೆ ಬಂದಿರಲಿಲ್ಲ. ನನಗೆ ತೆಲುಗು ಗೊತ್ತು. ಹಾಗಾಗಿ ಬಾಲಂಗೀರ್ ಸಹ ವಿಭಾಗೀಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟರು ನನ್ನನ್ನು ಎಸ್ ಡಿಸಿಯಾಗಿ ನೇಮಿಸಿದರು” ಎಂದು ಮೊಹೋಪಾತ್ರ ವಿವರಿಸಿದ್ದಾರೆ.

“ಎಟಿಎಂನಲ್ಲಿ ಮಲಗಿದ ಮಾತ್ರಕ್ಕೆ ಆತನನ್ನು ಕಳ್ಳನೆಂದು ತಿಳಿಯುವುದು ಯಾವ ನ್ಯಾಯ? ತೆಲುಗು ಬರುವವರಿಂದ ಮಾತನಾಡಿಸಿ ಅಸಲಿ ವಿಷಯ ಏನು ಎಂಬುದನ್ನು ಪೊಲೀಸರು ತಿಳಿದುಕೊಳ್ಳಬೇಕಾಗಿತ್ತು ಎಂದು ರಾಜುವಿನ ಆಪ್ತ ಶೇಕ್ ಮದೀನಾ ಹೇಳುತ್ತಾರೆ.
ಆರು ತಿಂಗಳ ಜೈಲುವಾಸದ ಬಳಿಕ ರಾಜು ಇದೀಗ ಮನೆ ಸೇರಿದ್ದಾನೆ.

Join Whatsapp
Exit mobile version