Home ಕ್ರೀಡೆ ಬಾಂಗ್ಲಾ ವಿರುದ್ಧದ ‌ ಏಕದಿನ ಸರಣಿ | ಗಾಯಾಳು ಮುಹಮ್ಮದ್‌ ಶಮಿ ಸ್ಥಾನಕ್ಕೆ ಉಮ್ರಾನ್‌ ಮಲಿಕ್‌...

ಬಾಂಗ್ಲಾ ವಿರುದ್ಧದ ‌ ಏಕದಿನ ಸರಣಿ | ಗಾಯಾಳು ಮುಹಮ್ಮದ್‌ ಶಮಿ ಸ್ಥಾನಕ್ಕೆ ಉಮ್ರಾನ್‌ ಮಲಿಕ್‌ ಆಯ್ಕೆ

ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೀರ್‌ಪುರ್‌ನಲ್ಲಿ ಭಾನುವಾರ ನಡೆಯಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಮ್‌ ಇಂಡಿಯಾ ಪಾಲಿಗೆ ಹಿನ್ನಡೆಯಾಗಿದ್ದು, ಅನುಭವಿ ಬೌಲರ್‌ ಮುಹಮ್ಮದ್‌ ಶಮಿ ಗಾಯದ ಕಾರಣದಿಂದ ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಶಮಿ ಸ್ಥಾನಕ್ಕೆ ಯುವ ವೇಗದ ಬೌಲರ್‌ ಉಮ್ರಾನ್‌ ಮಲಿಕ್‌ ಅವರನ್ನು ಬಿಸಿಸಿಐ ಹೆಸರಿಸಿದೆ.

ಶನಿವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಶಮಿ, ಬಲ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮೂರು ಏಕದಿನ ಪಂದ್ಯಗಳಿಗೂ ಅವರು ಅಲಭ್ಯರಾಗಿದ್ದಾರೆ. ಏಕದಿನ ಸರಣಿಯ ಬಳಿಕ ನಡೆಯುವ 2 ಟೆಸ್ಟ್‌ ಪಂದ್ಯಗಳಲ್ಲೂ ಶಮಿ ಆಡುವುದು ಅನುಮಾನವಾಗಿದೆ.

ʻಪ್ರತಿ ಕ್ಷಣವು ಅಮೂಲ್ಯವೆಂಬುದನ್ನು ಗಾಯವು ನಮಗೆ ನೆನಪಿಸುತ್ತದೆ. ವೃತ್ತಿಜೀವನದುದ್ದಕ್ಕೂ ಹಲವು ಬಾರಿ ಗಾಯದ ನೋವನ್ನು ಅನುಭವಿಸಿದ್ದೇನೆ. ಪ್ರತಿ ಬಾರಿ ಗಾಯದ ನೋವಿನಿಂದ ಹಲವು ಪಾಠ ಕಲಿತಿದ್ದೇನೆ. ಗಾಯದ ಬಳಿಕ ಮತ್ತಷ್ಟು ಬಲಶಾಲಿಯಾಗಿ ತಂಡಕ್ಕೆ ಮರಳಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳುʼ  ಎಂದು ಶಮಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಬಿಸಿಸಿಐ ಮೂಲಗಳ ಪ್ರಕಾರ, ಮುಹಮ್ಮದ್‌ ಶಮಿ, ಬೆಂಗಳೂರಿನಲ್ಲಿರುವ ಎನ್‌ಸಿಎ ಅಕಾಡೆಮಿಯ ವೈದ್ಯಕೀಯ ತಂಡದ ನಿರೀಕ್ಷಣದಲ್ಲಿದ್ದಾರೆ. ಟಿ20 ವಿಶ್ವಕಪ್‌ ವೇಳೆಯೇ ಅವರು ಗಾಯದಿಂದ ಸಂಫೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಎನ್‌ಸಿಎಗೆ ತೆರಳಲು ಬಿಸಿಸಿಐ ಶಮಿಗೆ ಸೂಚಿಸಿತ್ತು. ಈ ಕಾರಣದಿಂದ ಶಮಿ, ಟೀಮ್‌ ಇಂಡಿಯಾ ಜೊತೆ ಬಾಂಗ್ಲಾದEಶಕ್ಕೆ ಪ್ರಯಾಣಿಸುವುದು ತಡವಾಗಿತ್ತುʼ ಎಂದು ಇನ್‌ಸೈಡ್‌ ಸ್ಪೋರ್ಟ್ಸ್‌ ವರದಿ ಮಾಡಿದೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್‌ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್‌ ಕೀಪರ್‌), ಇಶಾನ್ ಕಿಶನ್ (ವಿಕೆಟ್‌ ಕೀಪರ್‌), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್ , ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮುಹಮ್ಮದ್. ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್

Join Whatsapp
Exit mobile version