ನವದೆಹಲಿ: ಪ್ರಸಕ್ತ ಭಾರತದಲ್ಲಿ ಜಾತಿ ಆಧಾರಿತ ಜನಗಣತಿ ಜಾರಿಯಾಗಲಿ ಎಂದು ಮುಸ್ಲಿಮ್ ಸಂಸ್ಥೆ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಪ್ರತಿಪಕ್ಷ ಯೋಜನೆ ರೂಪಿಸಲಿ ಎಂದು ಅದು ಆಗ್ರಹಿಸಿದೆ.
ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಸುವ ಜಾತಿ ಆಧಾರಿತ ಜನಗಣತಿ ನಡೆಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಕ್ಷಣ ಮುಂದಾಗಲಿ ಎಂದು ರಾಷ್ಟ್ರೀಯ ಮೊಮಿನ್ ಕಾನ್ಫರೆನ್ಸ್ ಒತ್ತಾಯಿಸಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆಯ ಅಧ್ಯಕ್ಷ ಶಕೀಲ್ ಅನ್ಸಾರಿ ಅವರು ಮುಸ್ಲಿಮ್ ಸಮುದಾಯದ ಬೇಡಿಕೆಗೆ ಕೇಂದ್ರ ಬಿಜೆಪಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆಯಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹಿಂದುಳಿದ ಆಯೋಗದ ಸದಸ್ಯರಾಗಿದ್ದ ಅನ್ಸಾರಿ ಮಾತನಾಡಿ, ಜಾತಿ ಅಧಾರಿತ ಜನಗಣತಿಯಿಂದ ಸಮಾಜದಲ್ಲಿ ಜನಜಾಗೃತಿ ಉಂಟಾಗುತ್ತದೆ ಮತ್ತು ನಿರ್ದಿಷ್ಟ ಸಮುದಾಯದ ಕಲ್ಯಾಣ ಯೋಜನೆ ರೂಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಇತ್ತೀಚೆಗೆ 17 ಸಂಘಟನೆಗಳ ಸಂಯೋಗದೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. 2011 ರಲ್ಲಿ ಭಾರತೀಯ ರಿಜಿಸ್ಟಾರ್ ಜನರಲ್ ನಡೆಸಿದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯು 46,73,034 ಜಾತಿ, ಉಪ-ಜಾತಿಗಳನ್ನು ಗುರುತಿಸಿದೆ. ಬ್ರಿಟಿಷರು ದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ 1881 ರಲ್ಲಿ ಮೊದಲ ಜಾತಿಗಣತಿ ನಡೆಸಿದ್ದರು. 1931 ರಲ್ಲಿ ಕೊನೆಯ ಬಾರಿಗೆ ಜಾತಿ ಆಧಾರಿತ ಜನಗಣತಿ ನಡೆಸಲಾಗಿದೆ.