Home ಟಾಪ್ ಸುದ್ದಿಗಳು ಬಿಜೆಪಿ ತೊರೆಯುತ್ತಿರುವ ಒಬಿಸಿ ನಾಯಕರು: ದಲಿತರ ಮನೆಯಲ್ಲಿ ಆದಿತ್ಯನಾಥ್ ಭೋಜನ

ಬಿಜೆಪಿ ತೊರೆಯುತ್ತಿರುವ ಒಬಿಸಿ ನಾಯಕರು: ದಲಿತರ ಮನೆಯಲ್ಲಿ ಆದಿತ್ಯನಾಥ್ ಭೋಜನ

ಲಕ್ನೋ : ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಭಾವಿ ನಾಯಕರು ಬಿಜೆಪಿಯನ್ನು ತೊರೆಯುತ್ತಿರುವ ಸಂದರ್ಭದಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದಲಿತರ ಮನೆಯಲ್ಲಿ ಭೋಜನ ಮಾಡಿದ್ದಾರೆ. ‌ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದ ದಲಿತರ ಮನೆಯೊಂದರಲ್ಲಿ ಶುಕ್ರವಾರ ಭೋಜನ ಸವಿಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಈ ವೇಳೆ ಮಾತನಾಡಿರುವ ಯೋಗಿ ಆದಿತ್ಯನಾಥ್‌, ‘ಸಮಾಜವಾದಿ ಪಕ್ಷದ ಆಡಳಿತದಲ್ಲಿ ಸಾಮಾಜಿಕ ಶೋಷಣೆ ಸಾಮಾನ್ಯವಾಗಿತ್ತೇ ಹೊರತು ಸಾಮಾಜಿಕ ನ್ಯಾಯವಲ್ಲ’ ಎಂದು ಟೀಕಿಸಿದ್ದಾರೆ.’ಯಾವುದೇ ತಾರತಮ್ಯವಿಲ್ಲದೆ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಕುಟುಂಬ ರಾಜಕೀಯದ ಹಿಡಿತದಲ್ಲಿರುವವರು ಸಮಾಜದ ಯಾವುದೇ ವರ್ಗಕ್ಕೆ ನ್ಯಾಯವನ್ನು ನೀಡಲು ಸಾಧ್ಯವಿಲ್ಲ. ಸಮಾಜವಾದಿ ಪಕ್ಷದ ಸರ್ಕಾರವು ದಲಿತರು ಮತ್ತು ಬಡವರ ಹಕ್ಕುಗಳ ಡಕಾಯತಿ ನಡೆಸಿತ್ತು’ ಎಂದೂ ಯೋಗಿ ವಾಗ್ದಾಳಿ ನಡೆಸಿದ್ದಾರೆ.ಯೋಗಿ ಆದಿತ್ಯನಾಥ್ ಸಂಪುಟದ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿ ಅವರು ಶುಕ್ರವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಇಬ್ಬರು ಸಚಿವರು ಸೇರಿದಂತೆ ಬಿಜೆಪಿ ತೊರೆದಿದ್ದ ಐವರು ಶಾಸಕರನ್ನು ಅಖಿಲೇಶ್‌ ಯಾದವ್‌ ಅವರು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಯೋಗಿ ಸರ್ಕಾರ ತೊರೆದು, ಎಸ್‌ಪಿಗೆ ಸೇರ್ಪಡೆಗೊಂಡಿರುವ ಮುಖಂಡರು ಹಿಂದುಳಿದ ವರ್ಗಗಳಿಗೆ ಸೇರಿದ ಪ್ರಭಾವಿಗಳು. ಇವರು ಬಿಜೆಪಿಯನ್ನು ದಲಿತ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಪಕ್ಷವೆಂದು ಆರೋಪಿಸಿದ್ದಾರೆ.

Join Whatsapp
Exit mobile version