ದಿಗಂಬರ ಜೈನ್ ಕಾಲೇಜಿನಲ್ಲಿ ABVP ಕಾರ್ಯಕರ್ತರಿಂದ ಜೈನ ದೇವತೆ ಶೃತಿದೇವಿ ಪ್ರತಿಮೆ ತೆರವಿಗೆ ದಾಂಧಲೆ : ವ್ಯಾಪಕ ಆಕ್ರೋಶ

Prasthutha|

ಲಖನೌ : ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯ ಬರೌತ್ ನ ದಿಗಂಬರ್ ಜೈನ್ ಕಾಲೇಜಿನಲ್ಲಿ ಸ್ಥಾಪಿಸಲಾದ ಜೈನ ದೇವತೆ ಶೃತಿದೇವಿಯ ಮೂರ್ತಿ ತೆರವುಗೊಳಿಸುವಂತೆ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ.

ಶೃತಿ ದೇವಿಯ ಪ್ರತಿಮೆಯ ಬದಲಾಗಿ ಸರಸ್ವತಿಯ ಪ್ರತಿಮೆ ಸ್ಥಾಪಿಸಬೇಕು ಎಂದು ದುಷ್ಕರ್ಮಿಗಳು ಒತ್ತಾಯಿಸಿದ್ದಾರೆ. ಏಳು ದಿನಗಳೊಳಗೆ ಪ್ರತಿಮೆ ತೆರವುಗೊಳಿಸಬೇಕು ಎಂದು ಬೆದರಿಕೆಯೊಡ್ಡಲಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ.

https://twitter.com/abvp_baghpat/status/1341360288101138434
- Advertisement -

ಮಂಗಳವಾರ ಘಟನೆ ನಡೆದಿದ್ದು, ಬುಧವಾರ ಜೈನ ಸಮುದಾಯದ ಪ್ರಮುಖರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಈ ಸಂಬಂಧ ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದ್ದಾರೆ. ಕಾಲೇಜಿನಲ್ಲಿ ದಾಂಧಲೆ ನಡೆಸಿದ ಮತ್ತು ತಮ್ಮ ದೇವತೆಯನ್ನು ಅವಮಾನಿಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಬಿವಿಪಿ ಕಾರ್ಯಕರ್ತರು ದಿಗಂಬರ ಜೈನ್ ಕಾಲೇಜಿನ ಒಳಗೆ ಬಂದು, ಕಾಲೇಜಿನ ಎಲ್ಲಾ ಕಡೆ ತಮ್ಮ ಬೀಗವನ್ನು ಹಾಕಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಆಪಾದಿಸಿದೆ.

ಕಾಲೇಜಿನಲ್ಲಿ ಎಬಿವಿಪಿ ನಡೆಸಿದ ದಾಂಧಲೆ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೊದಲು ಮುಸ್ಲಿಮರಲ್ಲಿ ಬಂದರು, ನಂತರ ಅವರು ಕ್ರೈಸ್ತರಲ್ಲಿಗೆ ಬಂದರು, ನಂತರ ಸಿಖ್ಖರಲ್ಲಿಗೆ ಬಂದರು, ಈಗ ಅವರು ಜೈನರಲ್ಲಿಗೆ ಬಂದಿದ್ದಾರೆ! ಮುಂದಿನ ಗುರಿ ನೀವೇ ಆಗಿದ್ದೀರಿ! ಎಂದು ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ಇದೇ ರೀತಿಯಲ್ಲಿ ನೆಟ್ಟಿಗರು ಹಲವು ಟ್ವೀಟ್ ಗಳನ್ನು ಮಾಡಿ ಎಬಿವಿಪಿ ಕಾರ್ಯಕರ್ತರ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -