Home ಟಾಪ್ ಸುದ್ದಿಗಳು ಬ್ರಹ್ಮಾವರ | ಕೃಷಿ ಡಿಪ್ಲೋಮಾ ಕೋರ್ಸ್ ಪ್ರಾರಂಭಕ್ಕೆ ಸೋಮವಾರ ಅಧಿಸೂಚನೆ : ಉಪಕುಲಪತಿ ಭರವಸೆ

ಬ್ರಹ್ಮಾವರ | ಕೃಷಿ ಡಿಪ್ಲೋಮಾ ಕೋರ್ಸ್ ಪ್ರಾರಂಭಕ್ಕೆ ಸೋಮವಾರ ಅಧಿಸೂಚನೆ : ಉಪಕುಲಪತಿ ಭರವಸೆ

►ಇಚ್ಚಿತಾರ್ಥ ಶೆಟ್ಟಿ ಮತ್ತು ಮಂಜುನಾಥ್ ಭಂಡಾರಿ ಪ್ರಯತ್ನ ಫಲಪ್ರದ

ಬೆಂಗಳೂರು : ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಲು 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾಲಯದಿಂದ ಅಧಿಸೂಚನೆ ಹೊರಡಿಸುವ ಕುರಿತು ಕುಂದಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿಯವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮೂಲಕ ಬೆಂಗಳೂರಿನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಮುಂದುವರೆಸಲು ಸರ್ಕಾರದಿಂದ ಆದೇಶ ಬಂದಿದ್ದರೂ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಇಲ್ಲಿಯವರೆಗೆ ಅಧಿಸೂಚನೆ ಹೊರಡಿಸಿರುವುದಿಲ್ಲ. ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕಾಲೇಜಿಗೆ ಸೇರಬಯಸುವ ವಿದ್ಯಾರ್ಥಿಗಳು ಕಾಲೇಜಿನವರನ್ನು ಸಂಪರ್ಕಿಸಿದಾಗ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿರುವುದಿಲ್ಲವೆಂದು ವಿದ್ಯಾರ್ಥಿಗಳಿಗೆ ತಿಳಿಸಿರುತ್ತಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಇದರ ಅಧೀನದಲ್ಲಿರುವ ಮಂಡ್ಯದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಈಗಾಗಲೇ ಕೋರ್ಸ್ ಪ್ರಾರಂಭಿಸಲು ಅಧಿಸೂಚನೆ ಹೊರಡಿಸಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬ್ರಹ್ಮಾವರದಲ್ಲೂ ಕೃಷಿ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಲು 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ಇವರಿಂದ ಅಧಿಸೂಚನೆ ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮಂಜುನಾಥ ಭಂಡಾರಿ ಮನವಿ ಮಾಡಿದ್ದಾರೆ..

ಇಚ್ಚಿತಾರ್ಥ ಶೆಟ್ಟಿಯವರ ಮನವಿ ಮೇರೆಗೆ ಮಂಜುನಾಥ್ ಭಂಡಾರಿಯವರು ಕೃಷಿ ಸಚಿವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದ್ದಾರೆ. ಸಚಿವರ ಭೇಟಿ ವೇಳೆ ಮಂಜುನಾಥ್ ಭಂಡಾರಿಗೆ ಇಚ್ಚಿತಾರ್ಥ ಶೆಟ್ಟಿ ಸಾಥ್ ನೀಡಿದ್ದರು.
ಕೃಷಿ ಸಚಿವ ಚಲುವರಾಯಸ್ವಾಮಿ ನಿರ್ದೇಶನದ ಮೇರೆಗೆ ಮಂಜುನಾಥ್ ಭಂಡಾರಿಯವರು ಕೃಷಿ ವಿಶ್ವಿದ್ಯಾಲಯದ ಉಪಕುಲತಿಗಳ ಜೊತೆ ಮಾತನಾಡಿದ್ದು, ಸೋಮವಾರ ಅಧಿಸೂಚನೆ ಹೊರಡಿಸುವುದಾಗಿ ಉಪಕುಲಪತಿಗಳು ತಿಳಿಸಿದ್ದಾರೆ ಎಂದು ಇಚ್ಚಿತಾರ್ಥ್ ಶೆಟ್ಟಿ ಮಾಹಿತಿ ನೀಡಿದರು.

ಬ್ರಹ್ಮಾವರ ಕೃಷಿ ಕಾಲೇಜಿನಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್‌ನ್ನು ಪುನಃ ಆರಂಭಿಸುವಂತೆ ಇಚ್ಚಿತಾರ್ಥ ಶೆಟ್ಟಿ ಮತ್ತು ಇನ್ನಿತರರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಸಂಬಂಧಪಟ್ಟವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುತ್ತಾರೆ. ಪರಿಣಾಮ ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಪುನರಾರಂಭಿಸಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ ಈವರೆಗೆ ಕೋರ್ಸ್ ಪುನರಾರಂಭಕ್ಕೆ ಅಧಿಸೂಚನೆ ಹೊರಡಿಸಿರಲಿಲ್ಲ. ಇದೀಗ ಇಚ್ಚಿತಾರ್ಥ್ ಶೆಟ್ಟಿ ಮತ್ತು ಮಂಜುನಾಥ್ ಭಂಡಾರಿಯವರ ಪ್ರಯತ್ನದ ಫಲ ಎಂಬಂತೆ
ಅಧಿಸೂಚನೆ ಹೊರಡಿಸಲು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಮುಂದಾಗಿದೆ.

Join Whatsapp
Exit mobile version