ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಹಾಲ ನಾಯಕನಹಳ್ಳಿ ಕೆರೆಯ ಕೋಡಿ ನೀರು ಹರಿಯಲು ಅಡ್ಡಿಯಾಗುವಂತೆ ನಿರ್ಮಿಸಲಾದ ರೈನ್ಬೋ ಡ್ರೈವ್ ಬಡಾವಣೆಯ 15 ವಿಲ್ಲಾಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.
ಸರ್ಜಾಪುರದಲ್ಲಿ ನಿರ್ಮಾಣವಾದ ಮೊದಲ ಮತ್ತು ಐಷಾರಾಮಿ ಬಡಾವಣೆಯಾಗಿರುವ ರೈನ್ಬೋ ಡ್ರೈವ್ ಹಾಲನಾಯಕನಹಳ್ಳಿ, ಸಿದ್ದಾಪುರ ಮತ್ತು ಜುನ್ನಸಂದ್ರ ಸೇರಿ ಮೂರು ಗ್ರಾಮಗಳ ಸರ್ವೇ ನಂಬರ್ನ ಜಮೀನಿನಲ್ಲಿ ಒಟ್ಟು 50 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಒಟ್ಟು 432 ಮನೆಗಳಿವೆ. ಕೆರೆಯ ನೀರು ಹರಿಯುವ ಪ್ರದೇಶವನ್ನು ಬಡಾವಣೆಯಾಗಿ ನಿರ್ಮಿಸಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಹಾಲನಾಯಕನಹಳ್ಳಿ ಕೆರೆ ಕೋಡಿ ಬಿದ್ದಾಗ ಭಾರಿ ಪ್ರಮಾಣದ ಪ್ರವಾಹ ಉಂಟಾಗಿತ್ತು. ಬಡಾವಣಿಯ ಪ್ರಮುಖ ರಸ್ತೆಗಳಲ್ಲಿ ಸುಮಾರು 6 ಅಡಿ ನೀರು ತುಂಬಿಕೊಂಡು ದ್ವಿಚಕ್ರ ವಾಹನಗಳು, ಕಾರುಗಳು ತೇಲಾಡಿದ್ದವು. ಆದ್ದರಿಂದ ಕೆರೆಯ ನೀರು ಹರಿಯುವ ಪ್ರದೇಶದಲ್ಲಿ ನಿರ್ಮಿಸಲಾದ 15 ವಿಲ್ಲಾ ಗಳನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾಲೀಕರು ತಮ್ಮ ವಿಲ್ಲಾಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಂದಾಯ ಇಲಾಖೆಯಿಂದ ತೆರವು ಮಾಡಲಾಗುತ್ತದೆ. ಅದಕ್ಕೆ ಮಾಡಲಾದ ವೆಚ್ಚವನ್ನು ಮಾಲೀಕರು ಭರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.