Home ಟಾಪ್ ಸುದ್ದಿಗಳು ಸರಕಾರದ ವೈಫಲ್ಯ ಮರೆಮಾಚಲು ಖರ್ಗೆ’ಗೆ ನೋಟಿಸ್: ಯು.ಟಿ ಖಾದರ್ ವಾಗ್ದಾಳಿ

ಸರಕಾರದ ವೈಫಲ್ಯ ಮರೆಮಾಚಲು ಖರ್ಗೆ’ಗೆ ನೋಟಿಸ್: ಯು.ಟಿ ಖಾದರ್ ವಾಗ್ದಾಳಿ

►► ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಪೊಲೀಸರ ವಿರುದ್ದವೂ ತನಿಖೆಯಾಗಲಿ

ಮಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಗೆ ಸಿಐಡಿ ನೋಟಿಸ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯುಟಿ ಖಾದರ್ ಸರಕಾರದ ವೈಫಲ್ಯ ಮರೆಮಾಚಲು ಖರ್ಗೆ ಗೆ ನೋಟೀಸ್ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಪಬ್ಲಿಕ್ ಡೊಮೈನ್‌’ನಲ್ಲಿ ಇದ್ದದ್ದನ್ನೇ ಮಾತನಾಡಿದ್ದು, ಇವರ ನೋಟಿಸುಗಳಿಗೆ ಕಾಂಗ್ರೆಸ್ ಜಗ್ಗಲ್ಲ ಎಂದಿದ್ದಾರೆ. ಖರ್ಗೆಗೆ ನೋಟೀಸ್ ನೀಡಿದವರು ನೇಮಕಾತಿ ಮುಖ್ಯಸ್ಥರಿಗೆ ಏಕೆ ನೋಟೀಸ್ ನೀಡಿಲ್ಲ ಎಂದು ಖಾದರ್ ಪ್ರಶ್ನಿಸಿದ್ದಾರೆ.

ಸರಕಾರದ ವಿರುದ್ಧ ಮಾತನಾಡಬಾರದೆನ್ನುವ ಧೋರಣೆ ಸರಿಯಲ್ಲ. ನೇಮಕಾತಿ ಅಕ್ರಮದಲ್ಲಿ ಇಡೀ ಇಲಾಖೆಯೇ ಭಾಗಿಯಾಗಿದೆ ಎಂದು ಆರೋಪಿಸಿದ ಖಾದರ್, ಮೊದಲು ನೇಮಕಾತಿ ಮುಖ್ಯಸ್ಥರನ್ನು ಕರೆದು ಗ್ರಿಲ್ ಮಾಡಬೇಕಿತ್ತು, ಆದರೆ ಇದ್ಯಾವುದೂ ಆಗಿಲ್ಲ. ಒಟ್ಟು ರಾಜ್ಯದಲ್ಲಿ ಭ್ರಷ್ಟಾಚಾರ ಖುಲ್ಲಂ ಖುಲ್ಲ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ತೊಡಗಿದ್ದವರು ಯಾವ ಪಕ್ಷದವರು ಅನ್ನೋದು ಮುಖ್ಯವಲ್ಲ, ಬ್ಲ್ಯಾಕ್ ಲಿಸ್ಟ್ ನಲ್ಲಿದ್ದ ಕಾಲೇಜನ್ನು ಪರೀಕ್ಷಾ ಕೇಂದ್ರ ಮಾಡಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಪೊಲೀಸರ ವಿರುದ್ದವೂ ತನಿಖೆಯಾಗಿ ಬಂಧನವಾಗಲಿ. ಪೊಲೀಸರ ತನಿಖೆಯನ್ನು ಸಿಐಡಿ ಪೊಲೀಸರೇ ಮಾಡುತ್ತಿರುವುದು ಸರಿಯಲ್ಲ, ನೇಮಕಾತಿ ನಡೆಸಿದ ಇಲಾಖಾ ಮುಖ್ಯಸ್ಥರೇ, ಸಿಐಡಿ ಮುಖ್ಯಸ್ಥರಾಗಿರುತ್ತಾರೆ ಎಂದು ಹೇಳಿದ್ದಾರೆ.

ಅಕ್ಷಯ ತದಿಗೆಗೆ ಮುಸ್ಲಿಂ ಜ್ಯುವೆಲ್ಲರಿ ಬಹಿಷ್ಕಾರಕ್ಕೆ ಪ್ರಮೋದ್ ಮುತಾಲಿಕ್ ಕರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಖಾದರ್, ಇದು ಮಾತನಾಡುವವರ ಸಮಸ್ಯೆಯಲ್ಲ, ಸರಕಾರ ಸುಮ್ಮನಿರುವುದೇ ಸಮಸ್ಯೆ ಎಂದರು. ಆಡಳಿತ ಸರಕಾರವೇ ಬೇಕಾಬಿಟ್ಟಿ ಮಾತನಾಡಲು ಬಿಟ್ಟು ಸುಮ್ಮನಿದೆ. ವಿಶ್ವದ ಯಾವುದೇ ದೇಶದಲ್ಲಿ ಇಂತಹ ವಿಚಾರಗಳಿಲ್ಲ, ಸರಕಾರದ ಮೌನ ದೇಶಕ್ಕೆ ದೊಡ್ಡ ನಷ್ಟ ತಂದಿಡಲಿದ್ದು, ದೇಶದ ಮೇಲೆ ಪ್ರೀತಿ ಇದ್ದರೆ ಸರಕಾರ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ಕಾಂಗ್ರೆಸ್ ನ ಹತ್ತು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ನಳಿನ್ ಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಖಾದರ್, ನಳಿನ್ ಈ ಹಿಂದೆ ಒಂದು ಡಾಲರ್ ಗೆ ₹20 ಮಾಡ್ತೇವೆ ಎಂದಿದ್ದರು, ರೂ.2000 ಗೆ ಮರಳು ಕೊಡ್ತೇವೆ ಎಂದಿದ್ದರು. ನಳಿನ್ ಕುಮಾರ್ ಅವರಿಂದ ಇದ್ಯಾವುದಾದ್ರೂ ಆಗಿದೆಯಾ, ಈ ವಿಚಾರವೂ ಹಾಗೆಯೇ ಎಂದು ಭಾವಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

Join Whatsapp
Exit mobile version