ನವದೆಹಲಿ: ನೋಟರಿ ವಕೀಲರಿಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಮಹತ್ವದ ಸೂಚನೆ ನೀಡಿದೆ.
ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಛೇದನದ ಅಫಿಡವಿಟ್ ಗೆ ಅಟೆಸ್ಟ್ ಮಾಡಿಸುವಂತಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.
ನೋಟರಿ ಕಾಯ್ದೆ 1952 ಸೆಕ್ಷನ್ 8 ಮತ್ತು ನೋಟರಿ ನಿಯಮಗಳು 1956ರ ನಿಮಯ 11ರ ಪ್ರಕಾರ ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನ ಮಾಡುವುದು ನೋಟರಿ ವಕೀಲರ ಕೆಲಸದ ಭಾಗವಲ್ಲ. ಈ ನಿಯಮ ಮತ್ತು ಕಾಯ್ದೆಗಳ ಪ್ರಕಾರ ನೋಟರಿ ವಕೀಲರು ಯಾವುದೇ ವಿವಾಹವನ್ನು ಅಧಿಕೃತಗೊಳಿಸಿ ಪ್ರಮಾಣ ಪತ್ರ ನೀಡುವಂತಿಲ್ಲ. ಅದೇ ರೀತಿ ವಿಚ್ಛೇದನ ಪತ್ರದ ನೋಂದಣಿಯನ್ನು ನೋಂದಾಯಿಸುವಂತಿಲ್ಲ. ನೋಟರಿ ವಕೀಲರು ವಿವಾಹ ಅಧಿಕಾರಿಯಾಗಿ ನೇಮಕಗೊಂಡಿಲ್ಲ. ವೈವಾಹಿಕ ನೋಂದಣಿಗಳ ಪ್ರದತ್ತ ಅಧಿಕಾರವನ್ನು ನೋಟರಿ ವಕೀಲರಿಗೆ ನೀಡಲಾಗಿಲ್ಲ ಎಂದು ಇಲಾಖೆಯಿಂದ ಹೊರಡಿಸಲಾದ ಕಚೇರಿ ಜ್ಞಾಪನಾ ಪತ್ರದ ನೋಟೀಸ್ ನಲ್ಲಿ ತಿಳಿಸಲಾಗಿದೆ.
ಯಾರಾದರೂ ನೋಟರಿ ವಕೀಲರ ನೆಲೆಯಲ್ಲಿ ವೈವಾಹಿಕ ದಾಖಲೆಗಳನ್ನು ವಿವಾಹ ನೋಂದಣಿ ಅಥವಾ ವಿಚ್ಛೇದನ ಕರಾರನ್ನು ದೃಢಪಡಿಸಿದ್ದಲ್ಲಿ ಅಥವಾ ನೋಂದಣಿ ಮಾಡಿಸಿಕೊಂಡಲ್ಲಿ ಅದನ್ನು ಗಂಭೀರ ದುರ್ವರ್ತನೆ ಎಂದು ಪರಿಗಣಿಸಲಾಗುವುದು ಮತ್ತು ಅಂತಹ ವಕೀಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.