ಲಕ್ನೋ: ಸಾರ್ವಜನಿಕರ ತೆರಿಗೆಯ ಹಣವನ್ನು ಕಬರ್ ಸ್ತಾನದ ಬದಲು ದೇವಸ್ಥಾನಗಳ ನವೀಕರಣಕ್ಕಾಗಿ ಬಳಸುತ್ತಿದೆ ಎಂದು ಹಾಸ್ಯಾಸ್ಪದ ಹೇಳಿಕೆ ನೀಡಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಕಬರ್ ಸ್ತಾನದ ವಿಚಾರವನ್ನೂ ರಾಜಕೀಯಕ್ಕೆ ಎಳೆದುತಂದ ಮುಖ್ಯಮಂತ್ರಿ ವಿರುದ್ಧ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ವಿನಿಯೋಗಿಸಬೇಕಾದ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದೀಪಾವಳಿ ಪ್ರಯುಕ್ತ ಸರ್ಕಾರದ ವತಿಯಿಂದ ರಾಮ್ ಕಥಾ ಪಾರ್ಕ್ ನಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ವಿರೋಧ ಪಕ್ಷವನ್ನು ಗುರಿಪಡಿಸಿ ಹೇಳಿಕೆ ನೀಡುವ ಭರದಲ್ಲಿ ಈ ರೀತಿಯ ವಿಚಿತ್ರ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.
ಮುಂದಿನ ವರ್ಷ ನಡೆಯುವ ಅಸೆಂಬ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಹಿಂದೂ ಮತಗಳ ಓಲೈಕೆಗಾಗಿ ಈ ರೀತಿಯ ಹೇಳಿಕೆ ಹರಿಯ ಬಿಡಲಾಗುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಪ್ರಸಕ್ತ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ವಿವಾದಾತ್ಮಕ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಉತ್ತರ ಪ್ರದೇಶದ 500 ದೇವಸ್ಥಾನ ಮತ್ತು ಧಾರ್ಮಿಕ ಸ್ಥಳಗಳ ನವೀಕರಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳ ರೂಪದಲ್ಲಿ ಸಾರ್ವಜನಿಕರ ಹಣವನ್ನು ಬಳಕೆ ಮಾಡುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.