ಕುರ್‌ಆನಿನ ಕೆಲವು ವಚನಗಳನ್ನು ತೆಗೆದುಹಾಕುವಂತೆ ಕೋರಿ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಝ್ವಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದು ಈ ಬಗ್ಗೆ ರಾಷ್ಟ್ರದಾದ್ಯಂತ ವ್ಯಾಪಕ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದೆ. ಬಿಜೆಪಿಯ ಹಿರಿಯ ಮುಖಂಡನಾಗಿರುವ ಸೈಯ್ಯದ್ ಶಹನವಾಜ್ ಹುಸೇನ್ ರಿಝ್ವಿಯವರ ಕ್ರಮವನ್ನು ಖಂಡಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಹಿರಿಯ ಮುಖಂಡನಾಗಿರುವ ಸೈಯದ್ ಶಹನಾವಾಜ್ ಹುಸೇನ್ “ರಿಝ್ವಿ ಅವರು ಇಂತಹ ಕೃತ್ಯದಲ್ಲಿ ತೊಡಗುವ ಮೂಲಕ ದೇಶದ ವಾತಾವರಣವನ್ನು ಹದಗೆಡಿಸಬಾರದು” ಎಂದು ಹೇಳಿದ್ದಾರೆ. “ಕುರಾನ್‌ನಿಂದ 26 ವಚನಗಳನ್ನು ತೆಗೆದುಹಾಕಬೇಕೆಂದು ಕೋರಿ ವಾಸಿಮ್ ರಿಝ್ವಿ ಅವರ ಅರ್ಜಿಯನ್ನು ನಾನು ಬಲವಾಗಿ ಆಕ್ಷೇಪಿಸುತ್ತೇನೆ ಮತ್ತು ಖಂಡಿಸುತ್ತೇನೆ. ಕುರ್‌ಆನ್ ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥಗಳ ಬಗ್ಗೆ ಅಸಂಬದ್ಧ ವಿಷಯಗಳನ್ನು ಹೇಳುವುದು ಅತ್ಯಂತ ಖಂಡನೀಯ ಕಾರ್ಯವಾಗಿದೆ ಎಂಬುದು ನನ್ನ ನಿಲುವು” ಎಂದು ಹುಸೇನ್ ಪಿಟಿಐಗೆ ತಿಳಿಸಿದ್ದಾರೆ.
ಕುರಾನಿನಿಂದ 26 ಸೂಕ್ತಗಳನ್ನು ತೆಗೆದುಹಾಕಬೇಕೆಂದು ಕೋರಿ ವಸೀಮ್ ರಿಜ್ವಿ ಅವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಕುರಿತು ತನ್ನದೇ ಆದಂತಹಾ ಸಮರ್ಥನೆಗಳನ್ನು ರಿಝ್ವಿ ನೀಡಿದ್ದರು.