Home ಕ್ರೀಡೆ ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ ಹೊಸ ದಾಖಲೆ ಬರೆದ ಎರ್ಲಿಂಗ್‌ ಹಾಲೆಂಡ್

ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ ಹೊಸ ದಾಖಲೆ ಬರೆದ ಎರ್ಲಿಂಗ್‌ ಹಾಲೆಂಡ್

ಸ್ಪೇನ್‌: ಪ್ರತಿಷ್ಠಿತ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಮ್ಯಾಂಚೆಸ್ಟರ್‌ ಸಿಟಿ, ರಿಯಲ್‌ ಮ್ಯಾಡ್ರಿಡ್‌ ಹಾಗೂ ಪಿಎಸ್‌ಜಿ ತಂಡಗಳು ಸುಲಭ ಗೆಲುವು ದಾಖಲಿಸಿದೆ.

ಸ್ಪೇನ್‌ನ ರಾಮೊನ್‌ ಸ್ಯಾಂಚೆಝ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಸೆವಿಲ್ಲೆ ತಂಡವನ್ನು, ಬಲಿಷ್ಠ ಮ್ಯಾಂಚೆಸ್ಟರ್‌ ಸಿಟಿ ತಂಡ 4-0 ಅಂತರದಲ್ಲಿ ಮಣಿಸಿತು. ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ್ದ ಸಿಟಿ, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಮೂರು ಗೋಲು ಗಳಿಸಿತು. ಎರ್ಲಿಂಗ್ ಹಾಲೆಂಡ್ 20 ಮತ್ತು 67ನೇ ನಿಮಿಷದಲ್ಲಿ ಗೋಲು ಗಳಿಸಿದರೆ, 58 ನಿಮಿಷದಲ್ಲಿ ಫಿಲ್ ಫೋಡೆನ್ ಮತ್ತು ಹೆಚ್ಚುವರಿ ಅವಧಿಯಲ್ಲಿ (90+2) ಡಿಫೆಂಡರ್‌ ರೂಬೆನ್ ಡಯಾಸ್ ಗೋಲು ಗಳಿಸುವ ಮೂಲಕ, ಸಿಟಿ ಭರ್ಜರಿ ಗೆಲುವು ದಾಖಲಿಸಿತು.

ಈ ಪಂದ್ಯದಲ್ಲಿ 2 ಗೋಲು ಗಳಿಸುವ ಮೂಲಕ ಎರ್ಲಿಂಗ್ ಹಾಲೆಂಡ್, ತಮ್ಮ ವೃತ್ತಿಜೀವನದ 20ನೇ ಯುಸಿಎಲ್‌ ಪಂದ್ಯದಲ್ಲಿ 25 ಗೋಲು ಗಳಿಸಿದ ಸಾಧನೆ ಮಾಡಿದರು. ಆ ಮೂಲಕ ಯುಸಿಎಲ್‌ನಲ್ಲಿ, ಈ ಸಂಖ್ಯೆಯನ್ನು ತಲುಪಿದ ಮೊತ್ತ ಮೊದಲನೆಯ ಆಟಗಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು. ಚಾಂಪಿಯನ್ಸ್‌ ಲೀಗ್‌ನಲ್ಲಿ ಅತ್ಯಧಿಕ ಗೋಲು ಗಳಿಸಿದ ದಾಖಲೆ ಹೊಂದಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ, ತಮ್ಮ ಮೊದಲ 25 ಪಂದ್ಯಗಳಲ್ಲಿ ಯಾವುದೇ ಗೋಲು ಗಳಿಸಿರಲಿಲ್ಲ. ಮತ್ತೊಂದೆಡೆ ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ಕೇವಲ 8 ಗೋಲು ಗಳಿಸಿದ್ದರು.

ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ ಮತ್ತು ಚಾಂಪಿಯನ್ಸ್‌ ಲೀಗ್‌ನ ತಮ್ಮ ಮೊದಲ ಪಂದ್ಯದಲ್ಲಿ ಗೋಲು ದಾಖಲಿಸಿದ ಮ್ಯಾಂಚೆಸ್ಟರ್‌ ಸಿಟಿಯ ಏಕೈಕ ಆಟಗಾರ ಎಂಬ ಕೀರ್ತಿಗೂ ಹಾಲೆಂಡ್‌ ಪಾತ್ರರಾಗಿದ್ದಾರೆ.  ಈ ಋತುವಿನಲ್ಲಿ ಸಿಟಿ ತಂಡವನ್ನು ಸೇರಿದ್ದ ನಾರ್ವೆಯ ಹಾಲೆಂಡ್‌, ಇದುವರೆಗೂ 8 ಪಂದ್ಯಗಳಿಂದ 12 ಗೋಲು ಗಳಿಸಿದ್ದಾರೆ. ಇದು ಕೂಡ ದಾಖಲೆಯಾಗಿದೆ.‌

ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಮೊದಲ ದಿನದ ಇತರ ಫಲಿತಾಂಶಗಳು

ಡೈನಾಮೊ ಜಾಗ್ರೆಬ್ 1-0 ಚೆಲ್ಸಿಯಾ

ಡಾರ್ಟ್‌ಮಂಡ್‌ 3- 0 ಕೋಪನ್ ಹ್ಯಾಗನ್

ಬೆನ್‌ಫಿಕಾ 2 – 0 ಮಕ್ಕಾಬಿ ಹೈಫಾ

ಆರ್‌ಬಿ ಸಾಲ್ಸ್‌ಬರ್ಗ್‌ 1 – 1 ಇಂಟರ್‌ ಮಿಲನ್

ಸೆಲ್ಟಿಕ್ 0- 3 ರಿಯಲ್ ಮ್ಯಾಡ್ರಿಡ್

ಆರ್‌ಬಿ ಲಿಬ್‌ಝಿಗ್‌  1 – 4 ಶಾಖ್ತರ್ ಡೊನೆಟ್ಸ್ಕ್

ಪಿಎಸ್‌ಜಿ 2- 1 ಜುವೆಂಟಸ್

Join Whatsapp
Exit mobile version