ನವದೆಹಲಿ: ಸಮಾಜವಾದಿ ಮತ್ತು ಜಾತ್ಯತೀತ ಎಂಬಿತ್ಯಾದಿ ಪದಬಳಕೆಯನ್ನು ಭಾರತದ ಸಂವಿಧಾನದಿಂದ ಕೈಬಿಡುವಂತೆ ಕೋರಿ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸುಪ್ರೀಮ್ ಕೋರ್ಟ್’ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 23ರಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಹಿರಿಯ ವಕೀಲರಾದ ಸತ್ಯ ಸಬರ್ವಾಲ್ ಅರ್ಜಿದಾರರ ಪರವಾಗಿ ಸುಪ್ರೀಮ್ ಕೋರ್ಟ್’ನಲ್ಲಿ ವಾದಿಸಲಿದ್ದಾರೆ.
ಹಿಂದಿನ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರು ಸಂವಿಧಾನವನ್ನು ತಿದ್ದುಪಡಿ ಮಾಡಿ ಕಲಂ 368ರ ಅನ್ವಯ ಸಂಸತ್ ಅಧಿಕಾರ ಉಪಯೋಗಿಸಿ ಸಮಾಜವಾದಿ, ಜಾತ್ಯತೀತ ಪದವನ್ನು ಸೇರಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಆಶಯವನ್ನು ಮಂಡಿಸಲು ಸಂವಿಧಾನದ ರಚನಾಕಾರರು ಆಸಕ್ತಿ ಹೊಂದಿರಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.