Home ಟಾಪ್ ಸುದ್ದಿಗಳು ಅತಿವೃಷ್ಟಿ: ರಕ್ಷಣಾ, ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಅತಿವೃಷ್ಟಿ: ರಕ್ಷಣಾ, ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಮೈಸೂರು:  ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ಸರ್ಕಾರ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ತೊಡಗಿಸಿಕೊಂಡು ಹಾಗೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.  ಉಡುಪಿಯಲ್ಲಿ ಸಚಿವ ಎಸ್. ಅಂಗಾರ, ಸುನೀಲ್ ಕುಮಾರ್ ಮಂಗಳೂರಿನಲ್ಲಿ, ಉತ್ತರ ಕನ್ನಡದಲ್ಲಿ ಕೋಟ ಶ್ರೀನಿವಾಸ ಪೂಜಾರಿ  ಹಾಗೂ ಎಸ್.ಟಿ ಸೋಮಶೇಖರ್ ಅವರುಗಳು  ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕಂದಾಯ ಸಚಿವರು  ಕೊಡಗು ಮಂಗಳೂರಿಗೆ ಹೋಗಿ ಬಂದಿದ್ದಾರೆ. ಇಡೀ ಸರ್ಕಾರವೇ  ಈ ಬಗ್ಗೆ  ಕಾರ್ಯನಿರ್ವಹಿಸುತ್ತಿದೆ. ನಾನೂ ಸಹ ಇಂದು ಮಳೆ ಹಾನಿ ಪ್ರದೇಶ ಗಳಿಗೆ   ಭೇಟಿ ನೀಡಿ ಅಗತ್ಯವಿರುವ ಸೂಚನೆ ಸಲಹೆಗಳನ್ನು ನೀಡಲಿದ್ದೇನೆ ಎಂದರು.

ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾಣ ಮತ್ತು ಆಸ್ತಿ ಹಾನಿಯಾಗಿರುವ ಪ್ರದೇಶಗಳಲ್ಲಿ  ಜನರ ಮನ ಓಲೈಸುವ ಕೆಲಸ ಮಾಡುತ್ತೇವೆ. ಸೆಸ್ಮಿಕ್ ವಲಯಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದರು.

ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ  ಭೂ ಕುಸಿತವಾಗಿದ್ದು, ಕೊಡಗಿನಲ್ಲಿ ಭೂಕಂಪ, ಕಡಲುಕೊರೆತವಾಗಿದ್ದು, ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಜಲಾಶಯಗಳಿಂದ ನೀರು ಹೊರಬಿಟ್ಟ ಸಂದರ್ಭದಲ್ಲಿ  ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ಯಾಗಿದೆ. ಪ್ರಥಮ ಹಂತದ ಸಮೀಕ್ಷೆಯಾಗಿದೆ. ಈ ಬಗ್ಗೆ ನಿಖರ ಮಾಹಿತಿ ನೀಡಲಾಗುವುದು ಎಂದರು.

ಬೆಳೆ ಹಾನಿ ಅಂದಾಜು ಮಾಡಿದ ನಂತರ ಕೇಂದ್ರದಿಂದ ಪರಿಹಾರ ಕೇಳುವ ಬಗ್ಗೆ ತೀರ್ಮಾನಿಸಲಾಗುವುದು. ಎನ್.ಡಿ.ಆರ್.ಎಫ್  ನಲ್ಲಿ  730 ಕೋಟಿ ರೂ.ಗಳು ಲಭ್ಯವಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದರು.

ಕರ್ನಾಟಕದಲ್ಲಿ 63 ಊರುಗಳನ್ನು ಸ್ಥಳಾಂತರಿಸಲಾಗಿದೆ.  ಕೆಲವು ಕಡೆ ಜನರು ಸ್ಥಳಾಂತರ ವಾಗಿಲ್ಲ. ವಿಶೇಷವಾಗಿ ನದಿ ಪಾತ್ರಲ್ಲಿರುವ ಗ್ರಾಮಗಳಲ್ಲಿನ ಮನೆಗಳನ್ನು ಸ್ಥಳಾಂತರ ಮಾಡಿ ಸುರಕ್ಷಿತಗೊಳಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಆ ಪ್ರಕಾರ  ವಿಶೇಷವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ನಿಗಮ ಮಂಡಳಿಗಳ ಕೋರ್ ಸಮಿತಿಯಲ್ಲಿ ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನವಾಗಿದೆ. ಬೇರೆಯವರಿಗೂ ಅವಕಾಶ ಒದಗಿಸಲಾಗುತ್ತಿದೆ ಎಂದರು.

Join Whatsapp
Exit mobile version