Home ಟಾಪ್ ಸುದ್ದಿಗಳು ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಅದರ ಅಗತ್ಯವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರ ಮಾಡಿದ್ದೇವೆ. ಎರಡೂ ಕಡೆ ಅಭೂತಪೂರ್ವ ಬೆಂಬಲ ಇದೆ. ಎರಡೂ ಕಡೆ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.


ಡ್ರಗ್ಸ್ ವಿರುದ್ಧ ನಾನು ಯುದ್ಧ ಘೋಷಣೆ ಮಾಡಿದ್ದೇನೆ. ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ಸ್ ಸೀಝ್ ಮಾಡಲಾಗಿದೆ. ಕಾನೂನಿನನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕೇಸ್ ಹಾಕಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದು ತಿಳಿಸಿದರು.
ಬಿಟ್ ಕಾಯಿನ್ ಪ್ರಕರಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಡ್ರಗ್ಸ್ ಪ್ರಕರಣದಲ್ಲಿ ಶ್ರೀಕೃಷ್ಣ ಎಂಬಾತನ ಬಂಧನ ಆಗಿತ್ತು. ಡ್ರಗ್ ಜತೆಗೆ ಹ್ಯಾಕಿಂಗ್ ಸಹ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಟ್ ಕಾಯಿನ್ ದಂಧೆಯಲ್ಲಿ ಯಾರನ್ನೋ ರಕ್ಷಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆರೋಪ ಮಾಡುತ್ತಿದಾರೆ ಎಂದರು.


ಕಾಂಗ್ರೆಸ್ ನವರು ಸಂಪೂರ್ಣ ಮಾಹಿತಿ ತರಿಸಿಕೊಂಡು ಮಾತನಾಡಲಿ, ಎಲ್ಲವೂ ಸ್ಪಷ್ಟವಾಗಿದೆ. ಯಾರೆಲ್ಲಾ ಕಾಲದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡಿಲ್ಲ, ಮಾಡುವ ಅಗತ್ಯವೂ ಇಲ್ಲ. ಕೇಂದ್ರೀಯ ತನಿಖಾ ಸಂಸ್ಥೆಗಳು, ರಾಜ್ಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಅಗತ್ಯವಿದ್ದರೆ ಮತ್ತೊಮ್ಮೆ ತನಿಖೆ ನಡೆಸಲಾಗುವುದು ಎಂದರು.


2018 ರ ಫೆಬ್ರವರಿಯಲ್ಲಿ ಶ್ರೀಕಿ ಮೇಲೊಂದು ಕೇಸ್ ದಾಖಲಾಗುತ್ತದೆ. ಆತನ ಜತೆ ಇದ್ದ ಐದಾರು ಜನರ ಬಂಧನ ಆಗುತ್ತದೆ. ಆದರೆ ಆತನ ಬಂಧನ ಮಾಡಿರಲಿಲ್ಲ. ಆಗ ಯಾವ ಸರ್ಕಾರ ಇತ್ತು ಗಮನಿಸಿ. ನಂತರ ಆತನಿಗೆ ಜಾಮೀನು ಸಿಗುತ್ತದೆ. ಜಾಮೀನು ಸಿಕ್ಕಿದ ಬಳಿಕವೂ ಕರೆಸಿ ವಿಚಾರಣೆ ಮಾಡಿಲ್ಲ. ಯುಬಿ ಸಿಟಿ ದಾಂಧಲೆ ಪ್ರಕರಣದಲ್ಲಿ ಆತನ ಬಂಧನ ಆಗಿರುತ್ತದೆ. ಆಗಲೇ ಸರಿಯಾಗಿ ವಿಚಾರಣೆ ಮಾಡಿದ್ದರೆ ಆತನ ಇತರೆ ದುಷ್ಕೃತ್ಯ, ಡ್ರಗ್ ವಿಚಾರ ಬಯಲಿಗೆ ಬರುತ್ತಿತ್ತು ಎಂದು ಬೊಮ್ಮಾಯಿ ಹೇಳಿದರು.


ನಾವು ಅತ್ಯಂತ ಪ್ರಾಮಾಣಿಕತೆಯಿಂದ ಕೇಸ್ ನ ತನಿಖೆ ಮಾಡಿದ್ದೇವೆ. ಈ ಕೇಸ್ ನಲ್ಲಿ ನೊ ಕಾಂಪ್ರಮೈಸ್. ನಾವು ಕೇಸ್ ನಲ್ಲಿ ಸ್ಪಷ್ಟವಾಗಿದ್ದೇವೆ. ನಾವು ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಬಿಟ್ ಕಾಯಿನ್ ನಲ್ಲಿ ಪ್ರಭಾವಿಗಳು ಭಾಗಿಯಾಗಿದ್ದು, ಅವರನ್ನು ರಕ್ಷಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸಾಕ್ಷಿ ಆಧಾರ ಇಟ್ಟು ಮಾತಾಡಬೇಕು. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಸಣ್ಣ ಸಾಕ್ಷಿ ಆಧಾರ ಕೊಡಲಿ, ಅದನ್ನೂ ತನಿಖೆ ಮಾಡುತ್ತೇವೆ. ಸೂತ್ರ ಇಲ್ಲದೇ ಪಟ ಬಿಡಲು ಹೋಗಬಾರದು ಎಂದು ಕುಟುಕಿದರು.


ನಮ್ಮ ಸರ್ಕಾರದ ಇ-ಪೋರ್ಟಲ್ ಹ್ಯಾಕ್ ಮಾಡಿದ್ದು ಬೇರೆ ಕೇಸ್. 2019 ರ ಜುಲೈ ನಲ್ಲಿ ಶ್ರೀಕಿ ಎಂಬಾತ ಸರ್ಕಾರದ ಇ ಪೋರ್ಟಲ್ ಹ್ಯಾಕ್ ಮಾಡಿದ್ದ. ನಾವು ಆತನನ್ನು ಬಂಧಿಸಿದ್ದೇವೆ. ಕಾಂಗ್ರೆಸ್ ಆತನ ಬಂಧಿಸದೇ ಬಿಟ್ಟಿತ್ತು. 3/3/2021 ರಲ್ಲಿ ನಾವು ಇಡಿಗೆ ಮನಿ ಲಾಂಡರಿಂಗ್ ಕೇಸು ಶಿಫಾರಸು ಮಾಡಿದ್ದೇವೆ. ಇಡಿ ತನಿಖೆ ನಡೆಯುತ್ತಿದೆ. ನಮ್ಮ ಈ ಪೋರ್ಟಲ್ ಸಹ ಆತ ಹ್ಯಾಕ್ ಮಾಡಿದ್ದ. ಇದನ್ನು ಸಿಐಡಿ ತನಿಖೆ ಮಾಡುತ್ತಿದೆ. ಸಿಬಿಐನ ಇಂಟರ್ ಪೋಲ್ ಬ್ರಾಂಚ್ ಗೂ ಕೇಸ್ ಶಿಫಾರಸು ಮಾಡಿದ್ದೇವೆ. 28/04/21 ರಲ್ಲಿ ಸಿಬಿಐಗೆ ಕೇಸ್ ಶಿಫಾರಸು ಮಾಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.


ದೀಪಾವಳಿ ಗೈಡ್ ಲೈನ್ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಇದೆ. ಇದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ. ದೀಪಾವಳಿ ಗೆ ಯಾವುದೆಲ್ಲ ನಿಯಮ ತರಬೇಕು ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಹಾವಳಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಸ್ತೆ ಗುಂಡಿಗಳ ಬಗ್ಗೆ ವರದಿ ತರಿಸಿಕೊಂಡಿದ್ದೇನೆ, ಮಳೆ ಬಿದ್ದುದರಿಂದ ಗುಂಡಿ ಮುಚ್ಚು ಕೆಲಸ ತಡವಾಗಿದೆ. ಒಂದು ವಾರದೊಳಗೆ ಎಲ್ಲಾ ಪ್ರಮುಖ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಒಂದು ವಾರದ ಬಳಿಕ ನಗರ ಸಂಚಾರ ಮಾಡಿ ಅವಲೋಕನ ಮಾಡುತ್ತೇನೆ ಎಂದು ಸಿಎಂ ಹೇಳಿದರು.

Join Whatsapp
Exit mobile version