Home ಟಾಪ್ ಸುದ್ದಿಗಳು 9/11 ದಾಳಿಯಲ್ಲಿ ಒಸಾಮಾ ಬಿನ್ ಲಾದೆನ್ ಭಾಗಿಯಾಗಿರುವ ಕುರಿತು ಖಾತ್ರಿಯಿಲ್ಲ: ತಾಲಿಬಾನ್

9/11 ದಾಳಿಯಲ್ಲಿ ಒಸಾಮಾ ಬಿನ್ ಲಾದೆನ್ ಭಾಗಿಯಾಗಿರುವ ಕುರಿತು ಖಾತ್ರಿಯಿಲ್ಲ: ತಾಲಿಬಾನ್

ಕಾಬೂಲ್: ಅಮೆರಿಕದ ಅವಳಿ ಕಟ್ಟಡವನ್ನು ಧರೆಗುಳಿಸಿದ ಸೆಪ್ಟೆಂಬರ್ 11, 2001 ರ ಭಯೋತ್ಪಾದಕ ದಾಳಿಯಲ್ಲಿ ಅಲ್- ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾದೆನ್ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲವೆಂದು ತಾಲಿಬಾನ್ ಹೇಳಿದೆ.

9/11 ದಾಳಿಯ ನಂತರ ಲಾದೆನ್ ನನ್ನು ಅಮೆರಿಕಕ್ಕೆ ಹಸ್ತಾಂತರಿಸಲು ತಾಲಿಬಾನ್ ಬಂಡುಕೋರರು ನಿರಾಕರಿಸಿದ್ದರು.

ಈ ಕುರಿತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಬುಧವಾರ ನಡೆದ ಮಾಧ್ಯಮ ಸಂದರ್ಶನಲ್ಲಿ ಮಾತನಾಡಿ, ಒಸಾಮಾ ಬಿನ್ ಲಾದೆನ್ ಅಮೆರಿಕಕ್ಕೆ ಸಮಸ್ಯೆಯಾದಾಗ ಅವರು ಅಫ್ಘಾನಿಸ್ತಾನದಲ್ಲಿದ್ದರು. ಈ ಹಿನ್ನೆಲೆಯಲ್ಲಿ 9/11 ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲವೆಂದು ತಿಳಿಸಿದರು. ಅಲ್ಲದೆ ನಾವು ಅಫ್ಘಾನ್ ಮಣ್ಣನ್ನು ಯಾರ ವಿರುದ್ಧವೂ ಬಳಸುವುದಿಲ್ಲವೆಂದು ಸ್ಪಷ್ಟಪಡಿಸಿದರು.

2001 ರಲ್ಲಿ ಅವಳಿ ಕಟ್ಟಡದ ಮೇಲೆ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರು ಲಾದೆನ್ ಅವರನ್ನು ತಮ್ಮ ವಶಗೊಪ್ಪಿಸಿ, ಉಗ್ರರ ತರಬೇತಿ ಶಿಬಿರಗಳನ್ನು ನಾಶಪಡಿಸುವಂತೆ ಒತ್ತಾಯಿಸಿದ್ದರು. ಅಮೆರಿಕದ ಒತ್ತಡಕ್ಕೆ ಮಣಿಯದ ತಾಲಿಬಾನ್ ಬಂಡುಕೋರರು ಅಮೆರಿಕಕ್ಕೆ ಸಡ್ಡು ಹೊಡೆದಿದ್ದರು. ಬಳಿಕ ಅಮೆರಿಕ ಮಿತ್ರ ಪಡೆಗಳ ನೆರವಿನಿಂದ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ತಾಲಿಬಾನ್ ಆಡಳಿತವನ್ನು ಕೊನೆಗೊಳಿಸಿತ್ತು. ಗ್ಯಾರಿಸನ್ ಟೌನ್ ಅಬೋಟಾಬಾದ್ ನಲ್ಲಿ 2011 ರಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಲಾದೆನ್ ನನ್ನು ಕೊಲ್ಲಲಾಗಿದೆಯೆಂದು ಹೇಳಲಾಗುತ್ತಿದೆ.

ಕಳೆದ ವರ್ಷ ದೋಹಾದಲ್ಲಿ ಸಹಿ ಮಾಡಿದ ಯುಎಸ್-ತಾಲಿಬಾನ್ ಒಪ್ಪಂದದಂತೆ, ತಾಲಿಬಾನ್ ಅಲ್ ಖೈದಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುವುದಾಗಿ ಪ್ರತಿಜ್ಞೆ ಮಾಡಿತ್ತು.

Join Whatsapp
Exit mobile version