ಲಂಡನ್: ನೇರವಾಗಿ ಮೊದಲ ಬಾರಿಗೆ ಪ್ರತಿಪಕ್ಷ ಲೇಬರ್ ಪಾರ್ಟಿಯ ನಾಯಕ ಕೈರ್ ಸ್ಟಾರ್ಮರ್ ಅವರು ಹಿಂದೂಫೋಬಿಯಾ ಶಬ್ದವನ್ನು ಪ್ರಯೋಗಿಸಿ, ಹಿಂದೂಫೋಬಿಯಾ ದ್ವೇಷ ರಾಜಕೀಯವನ್ನು ಬ್ರಿಟನ್ ನಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಲೀಸೆಸ್ಟರ್ ಮತ್ತು ಬರ್ಮಿಂಗ್ ಹ್ಯಾಂನಲ್ಲಿ ಭಾರತ- ಪಾಕಿಸ್ತಾನ ಕ್ರಿಕೆಟ್ ಸಂಬಂಧ ಎದ್ದ ಗಲಭೆಯನ್ನೂ ಪ್ರಸ್ತಾಪಿಸಿದ ಅವರು, ದ್ವೇಷ ರಾಜಕಾರಣಕ್ಕೆ ಈ ನೆಲದಲ್ಲಿ ಸ್ಥಳವಿಲ್ಲ ಎಂದು ತಿಳಿಸಿದ್ದಾರೆ.
ಯೂರೋಪಿನ ಅತಿ ದೊಡ್ಡ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಸ್ಟಾರ್ಮರ್ ಅವರು ಹಿಂದೂಫೋಬಿಯಾದ ಬಿರುಗಾಳಿ ಎಬ್ಬಿಸಿದರು. ಬ್ರಿಟಿಷ್ ಭಾರತೀಯರು ವಿಭಜಕ ರಾಜಕೀಯವನ್ನು ಬಿಡಬೇಕು. ಸಮುದಾಯಗಳೊಳಗೆ ದ್ವೇಷ ಹರಡಲು ಉಗ್ರ ಮನಸ್ಸುಗಳು ಸಾಮಾಜಿಕ ಜಾಲ ತಾಣಗಳನ್ನು ದುರುಪಯೋಗಿಸಿಕೊಳ್ಳುತ್ತಿವೆ. ಕೆಲವು ವಿದೇಶಿ ನೆಲೆ ತಲೆಗಳು ಲೀಸೆಸ್ಟರ್ ಘಟನೆಯನ್ನು ಹಿಂದೂಫೋಬಿಯಾ ಎಂದಿದ್ದಾರೆ, ಇದಕ್ಕೆಲ್ಲ ಮೂಲ ಜಾಲ ತಾಣಗಳ ಪ್ರಚೋದನೆ ಎಂದು ಅವರು ಹೇಳಿದರು.
“ಹಿಂದೂಫೋಬಿಯಾಕ್ಕೆ ನಮ್ಮ ಸಮಾಜದಲ್ಲಿ ಚೂರು ಕೂಡ ಸ್ಥಳವಿಲ್ಲ, ನಾವೆಲ್ಲ ಅದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ಸ್ಟಾರ್ಮರ್ ಹೇಳಿದರು. ಕರತಾಡನದೊಂದಿಗೆ ಸೇರಿದವರೆಲ್ಲ ಅದನ್ನು ಸ್ವೀಕರಿಸಿದರು.
“ಇತ್ತೀಚಿನ ವರುಷಗಳಲ್ಲಿ ಧರ್ಮಾಧಾರಿತ ದ್ವೇಷ ರಾಜಕೀಯ ಹೆಚ್ಚಾಗಿರುವುದನ್ನು ನಾನು ಗಮನಿಸಿದ್ದೇನೆ. ಈ ವಿಭಜಕ ರಾಜಕೀಯ ಮಾರಕವಾಗಿದೆ. ಸಾಮಾಜಿಕ ಜಾಲ ತಾಣಗಳ ಪ್ರಚೋದನೆ ಮೂಲಕ ಈ ದ್ವೇಷ, ಹಿಂಸೆ ಹರಡುವುದನ್ನು ಕಂಡು ನಾನು ಬೇಸರಿಸಿದ್ದೇನೆ. ದ್ವೇಷ ಹರಡುವುದರ ವಿರುದ್ಧ ಈಗ ಯುದ್ಧವೇ ಆಗಬೇಕಾಗಿದೆ” ಎಂದು ಅವರು ಹೇಳಿದರು.
“ಇಂತಹ ದುರಾಚಾರಗಳಿಗೆ ನಾವು ಹೆದರುವುದೂ ಇಲ್ಲ; ಅವನ್ನೆಲ್ಲ ಸಹಿಸುವುದೂ ಇಲ್ಲ. ನಮ್ಮ ಧಾರ್ಮಿಕ ಸ್ಥಳಗಳು ಮತ್ತು ಚಿಹ್ನೆಗಳು ಗೌರವಿಸಲ್ಪಡಬೇಕು. ಲೇಬರ್ ಸರಕಾರ ಮತ್ತೆ ಬಂದಾಗ ಇದಕ್ಕೆಲ್ಲ ಇತಿಶ್ರೀ ಹಾಡಿ, ಸರ್ವ ಸಮತೆಯ ಸಮಾಜ ನಿರ್ಮಿಸಲಾಗುವುದು” ಎಂದೂ ಸ್ಟಾರ್ಮರ್ ತಿಳಿಸಿದರು.
ಲೇಬರ್ ಪಕ್ಷದವರು ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದವರಲ್ಲ. ಸ್ಟಾರ್ಮರ್ ಮೊದಲ ಬಾರಿಗೆ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಅವರಿಗಿಂತ ಮೊದಲು ಮಾತನಾಡಿದ ಜೆರೆಮಿ ಕಾರ್ಬೆನ್ ರ ಭಾರತದ ಪರ ನಿಲುವು ಸರಿ, ಆದರೆ ಅವರ ದ್ವೇಷ ರಾಜಕೀಯದ ಪರ ಅಲ್ಲ ಎಂದು ಸ್ಟಾರ್ಮರ್ ಸ್ಪಷ್ಟವಾಗಿ ಹೇಳಿದರು. ನವರಾತ್ರಿ ದುರ್ಗಾ ಶಕ್ತಿಯ ಬಗ್ಗೆ ಎಂದರೆ ಮಹಿಳಾ ಶಕ್ತಿಯನ್ನು ಹೇಳುತ್ತದೆ ಎಂದ ಮೇಲೆ ಮಹಿಳಾ ಸಬಲೀಕರಣ ನಮ್ಮ ಕರ್ತವ್ಯ ಎಂದೂ ಸ್ಟಾರ್ಮರ್ ತಿಳಿಸಿದರು.
ಮೊದಲ ಬಾರಿಗೆ ಲೇಬರ್ ಪಕ್ಷದವರು ಹಿಂದೂಪೋಬಿಯಾ ಶಬ್ದವನ್ನು ಬಳಸುವುದರ ಮೂಲಕ ಭಾರತ ಮತ್ತು ಪಾಕಿಸ್ತಾನದ ಪರ ಬ್ರಿಟನ್ ನಲ್ಲಿ ಹೊಡೆದಾಟ, ದ್ವೇಷ ಸೃಷ್ಟಿಸುವವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
“ಕನ್ಸರ್ವೇಟಿವ್ ಪಕ್ಷದ 12 ವರ್ಷಗಳ ಆಡಳಿತವು ದೇಶವನ್ನು ಸಮಸ್ಯೆಗಳಿಗೆ ದೂಡಿದೆ. ಲೇಬರ್ ಪಕ್ಷ ಹಿಂದೆಯೂ ಮುಂದೆಯೂ ಜನಪರವಾದುದು. 2024ರ ಚುನಾವಣೆಯಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಮರಳಲಿದೆ ಎನ್ನುವುದು ಇತ್ತೀಚಿನ ಜನ ಮತ ಗಣನೆಯಿಂದ ಸ್ಪಷ್ಟವಾಗಿದೆ” ಎಂದು ಸ್ಟಾರ್ಮರ್ ತಿಳಿಸಿದರು.
“ಹಿಂದೂ ಸಮಾಜವು ಬ್ರಿಟನ್ ಗೆ ನೀಡಿದ ಕೊಡುಗೆಯನ್ನು ಈ ಸಮಯದಲ್ಲಿ ನೆನಪಿಸಿಕೊಂಡು ಧನ್ಯವಾದ ಹೇಳಲು ಸಹ ಈ ಸಂದರ್ಭ ಒದಗಿ ಬಂದಿದೆ. ಸಾಂಸ್ಕೃತಿಕ, ವ್ಯಾಪಾರ, ಹಣಕಾಸು, ಇನ್ನಿತರೆ ಎಂದು ಬ್ರಿಟನ್ ನ ಭಾರತೀಯರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನೀವು ಬ್ರಿಟನ್ ನ ಅವಿಭಾಜ್ಯ ಅಂಗವಾಗಿದ್ದೀರಿ. ಈಗಿನ ಹಣಕಾಸಿನ ಬಿಕ್ಕಟ್ಟು ಏನಿದ್ದರೂ ಟೋರಿ ಆಡಳಿತದ್ದು” ಎಂದೂ ಸ್ಟಾರ್ಮರ್ ತಿಳಿಸಿದರು.