ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

Prasthutha|

- Advertisement -

ಗದಗ: ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಶಿರಹಟ್ಟಿಯಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು “ಟಿಪ್ಪು ಸುಲ್ತಾನನನ್ನು ಯುದ್ಧದಲ್ಲಿ ಬ್ರಿಟೀಷರು ಕೊಂದಂತೆ ನನ್ನನ್ನು ಕೊಲ್ಲಿ ಎಂದು ಸಚಿವ ಅಶ್ವಥ್ ನಾರಾಯಣ ಅವರು ಜನರಿಗೆ ಪ್ರಚೋದನೆ ನೀಡಿದ್ದಾರೆ, ಆದರೆ ಎಲ್ಲಿಯವರೆಗೆ ನನ್ನ ಮೇಲೆ ಜನರ ಆಶೀರ್ವಾದ ಇರುತ್ತದೆ ಅಲ್ಲಿಯವರೆಗೆ ನನ್ನನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

- Advertisement -

ಟಿಪ್ಪು ಸುಲ್ತಾನ್ ನನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಕೊಲ್ಲಬೇಕು ಎಂದು ಸಚಿವರಾದ ಅಶ್ವಥ್ ನಾರಾಯಣ ಕರೆ ನೀಡಿದ್ದಾರೆ. 1799ರಲ್ಲಿ ಟಿಪ್ಪು ಮತ್ತು ಬ್ರಿಟೀಷರಿಗೆ ಯುದ್ಧ ಆಗಿತ್ತು, ಆ ಸಂದರ್ಭದಲ್ಲಿ ಟಿಪ್ಪುವನ್ನು ಕೊಲ್ಲಲಾಯಿತು. ಅದೇ ರೀತಿ ಸಿದ್ದರಾಮಯ್ಯ ಅವರನ್ನು ಕೊಲ್ಲಬೇಕು ಎಂದು ಹೇಳಿದ್ದಾರೆ. ಇಂಥಾ ಪಕ್ಷಕ್ಕೆ, ನಾಯಕರಿಗೆ ಓಟ್ ಹಾಕುತ್ತೀರ? ನನ್ನನ್ನು ಮುಗಿಸಬೇಕು ಎಂದು ಜನರನ್ನು ಪ್ರಚೋದಿಸುತ್ತಿದ್ದಾರೆ. ಒಂದಂತು ಸತ್ಯ, ಎಲ್ಲಿಯವರೆಗೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಅಲ್ಲಿಯವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಶ್ವಥ್ ನಾರಾಯಣ ಅವರೇ ನೀವು ಹಗಲುಗನಸು ಕಾಣುತ್ತಿದ್ದೀರ. ಜನರನ್ನು ಪ್ರಚೋದನೆ ಮಾಡಲು ಹೋದರೆ ಜನ ಅದಕ್ಕೆ ಸೊಪ್ಪು ಹಾಕಲ್ಲ ಎಂದು ಸಿದ್ದರಾಮಯ್ಯ ಖಡಕ್ ಆಗಿಯೇ ಹೇಳಿದ್ದಾರೆ.

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಪ್ರಯತ್ನಿಸಿ

ರಾಜ್ಯದಲ್ಲಿ ಅತ್ಯಂತ ಭ್ರಷ್ಟ, ಕೋಮುವಾದಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯವರಿಂದ ತಳ ಸಮುದಾಯದ ಜನರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಶಿರಹಟ್ಟಿಯಲ್ಲಿ 14 ಮಂದಿ ಆಕಾಂಕ್ಷಿಗಳು ಟಿಕೇಟ್ ಗಾಗಿ ಅರ್ಜಿ ಹಾಕಿದ್ದಾರೆ, ಒಬ್ಬರಿಗೆ ಮಾತ್ರ ಟಿಕೇಟ್ ನೀಡಲು ಸಾಧ್ಯ, ಉಳಿದ 13 ಮಂದಿ ಒಬ್ಬರ ಕಾಲು ಇನ್ನೊಬ್ಬರು ಎಳೆಯದೆ, ಪಕ್ಷ ಘೋಷಿಸಿದ ಅಭ್ಯರ್ಥಿಯ ಸಹಾಯಕ್ಕೆ ನಿಂತುಕೊಂಡು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಂಪೂರ್ಣ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡುತ್ತೇನೆ.

ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ

ನಾವು ಮುಂದೆ ಅಧಿಕಾರಕ್ಕೆ ಬಂದ ಕೂಡಲೆ ಬಡಜನರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ನಾವು ಕೊಟ್ಟ ಮಾತಿನಂತೆ ಹಿಂದೆಯೂ ನಡೆದಿದ್ದೆವು, ಮುಂದೆಯೂ ನಡೆದುಕೊಳ್ತೇವೆ. ನಾವು ರಾಜ್ಯದ ಜನರಿಗೆ ಎರಡು ಪ್ರಮುಖ ವಚನಗಳನ್ನು ನೀಡಿದ್ದೇವೆ. ಮೊದಲನೆಯದು ಪ್ರತೀ ಮನೆಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ಅನ್ನು ನೀಡುತ್ತೇವೆ. ಎರಡನೆಯದು ಪ್ರತೀ ಮನೆಯ ಯಜಮಾನಿ ತಿಂಗಳಿಗೆ 2,000 ದಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತೇವೆ. ಈ ಎರಡು ಕಾರ್ಯಕ್ರಮಗಳಿಂದ ರಾಜ್ಯಕ್ಕೆ ಬೊಕ್ಕಸಕ್ಕೆ 40,000 ಕೋಟಿ ರೂ. ಖರ್ಚು ಬರುತ್ತದೆ. ಇದಕ್ಕೆ ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟಿದ್ದೇವೆ. ಕೊಟ್ಟ ಮಾತಿಗೆ ನಾವು ತಪ್ಪಿದರೆ ಒಂದು ಸೆಕೆಂಡ್ ಕೂಡ ರಾಜಕೀಯದಲ್ಲಿ ಇರುವುದಿಲ್ಲ. ನಾವು ನಿಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ, ಧೈರ್ಯವಾಗಿ ನೀವು ನಮ್ಮನ್ನು ಮತ್ತೆ ನಂಬಿ, ಮತ ಹಾಕಬಹುದು. ಈ ಬಾರಿ ಕೂಡ ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಕೈಮುಗಿದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

Join Whatsapp