ಮಂಗಳೂರು: ನವೆಂಬರ್ ನಲ್ಲಿ ಓಮೈಕ್ರಾನ್ ಬಂದಿದೆ. ಆದರೆ ಪ್ರಧಾನಿ ಮೋದಿಯವರಿಂದ ಹಿಡಿದು ರಾಜ್ಯದ ಬಿಜೆಪಿ ನಾಯಕರೆಲ್ಲ ಭಾರೀ ಮೆರವಣಿಗೆ ನಡೆಸಿದರು. ಈಗ ಕಾಂಗ್ರೆಸ್ ಪಕ್ಷವು ಮೇಕೆದಾಟು ನಡಿಗೆ ನಡೆಸುವಾಗ ರಾಜ್ಯ ಸರಕಾರವು ಓಮಿಕ್ರಾನ್ ನೆಪದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಯು. ಟಿ ಖಾದರ್ ತಿಳಿಸಿದರು.
ಮೇಕೆದಾಟು ಯೋಜನೆಯು ಜನರ ಕುಡಿಯುವ ನೀರಿನ ಅತ್ಯಗತ್ಯ ಯೋಜನೆಯಾಗಿದೆ. ಮೂಲೆಗೆ ಬಿದ್ದಿದ್ದ ಈ ಯೋಜನೆಯನ್ನು ಸಿದ್ದರಾಮಯ್ಯನವರು ಮತ್ತೆ ತೆರೆದಿಟ್ಟರು. ಕೇಂದ್ರ ಇದಕ್ಕೆ ಮೌಕಿಕ ಅನುಮತಿ ನೀಡಿದೆ. ಸುಪ್ರೀಂ ಕೋರ್ಟ್ ಸಹ ಕುಡಿಯುವ ನೀರಿನ ಯೋಜನೆಗೆ ಯಾವುದೇ ಎನ್ ವೈಸಿ ಅಗತ್ಯ ಇಲ್ಲ ಎಂದಿದೆ. ಹೀಗಿರುವಾಗ ಬಿಜೆಪಿ ಸರಕಾರವು ನಾಟಕ ಮಾಡಿ ಅದು ಆಗದಂತೆ ನೋಡುತ್ತಿರುವುದೇಕೆ ಎಂದು ಯು. ಟಿ. ಖಾದರ್ ಪ್ರಶ್ನಿಸಿದರು.
ಮೇಕೆದಾಟು 66 ಟಿಎಂಸಿ ಯೋಜನೆಯು ಪೋಲು ಆಗುತ್ತಿರುವ ನೀರನ್ನು ಬಳಕೆಗೆ ತರುವ ಯೋಜನೆಯಾಗಿದೆ. ಇದರಿಂದ ತಮಿಳುನಾಡಿಗೆ ಯಾವ ನಷ್ಟವೂ ಇಲ್ಲ. ಅದನ್ನು ಮಾಡಲು ತಮಿಳುನಾಡಿನ ಎನ್ ವೈಸಿ ಅಗತ್ಯವಿಲ್ಲ. ಇದರಲ್ಲಿ ಓಮಿಕ್ರಾನ್ ರಾಜಕೀಯ ತಿರುಚದೆ ಜನಪರ ಕೆಲಸ ಮಾಡಿ ಎಂದು ಖಾದರ್ ಆಗ್ರಹಿಸಿದರು.
ಮೇಕೆದಾಟು ಜನರು ಬಯಸುವ ಯೋಜನೆ. ಬೆಂಗಳೂರಿನಲ್ಲಿ ತುಳುವರಿಂದ ಹಿಡಿದು ಎಲ್ಲ ಜನರಿದ್ದಾರೆ. ಅವರಿಗೆಲ್ಲ ಉಪಯೋಗ ಇದು. ಬಿಜೆಪಿ ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದೆ ಎಂದು ಖಾದರ್ ಆರೋಪಿಸಿದರು.
ಎತ್ತಿನ ಹೊಳೆಯು ಸದಾನಂದ ಗೌಡರಿಂದ ಆರಂಭವಾಗಿ, ಅವರದೇ ಪಕ್ಷದವರ ವಿರೋಧ ಕಂಡ ಯೋಜನೆ. ಬಿಜೆಪಿ ಸರ್ಕಾರದ ಬುಲೆಟ್ ರೈಲು, 15 ಲಕ್ಷ ಇತ್ಯಾದಿ ಮಾತಿನ ಕತೆ ನೋಡಿ ಸಾಕಾಗಿದೆ. ಓಮಿಕ್ರಾನ್ ವಿಜ್ಞಾನ ಮಾತನಾಡಿ, ರಾಜಕೀಯ ಮಾಡಿ ಲಾಕ್ ಡೌನ್ ಅಗತ್ಯವಿಲ್ಲ ಎಂದೂ ಖಾದರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಶೆಟ್ಟಿ, ಸುಬೋಧ್ ಆಳ್ವ, ಫಾರೂಕ್, ಚಿತ್ತರಂಜನ್ ಮೊದಲಾದವರು ಉಪಸ್ಥಿತರಿದ್ದರು.