►18 ಮಂದಿಗೆ ನ್ಯಾಯಾಂಗ ಬಂಧನ
ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟದಿಂದಾಗಿ ನಗರದಲ್ಲಿ ಆತಂಕ ಮನೆಮಾಡಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಕರಣ ಸಂಬಂಧ ಜಿಲ್ಲೆಯ ಪೂರ್ವವಲಯ ಐಜಿಪಿ ರಮೇಶ್ ಬಾನೋತ್ ಮಾತನಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ (ಸೆ.19)ರಂದು ಸಂಜೆ ಗಣೇಶ ಮೆರವಣಿಗೆ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ ನಡೆದಿದ್ದು, ದಾವಣಗೆರೆ ಎಸ್ಪಿ ತಕ್ಷಣ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಶಾಂತಿ, ಸೌಹಾರ್ದತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಕಿಡಿಗೇಡಿಗಳನ್ನು ಪತ್ತೆಹಚ್ಚಿ 30 ಜನರ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮನೆಗಳ ಮೇಲೆ ಕಲ್ಲು ತೂರಾಟ, ಸಾರ್ವಜನಿಕರ ಮೇಲೆ ಕಲ್ಲೆಸೆತ ಸೇರಿ ಒಟ್ಟು ಐದು ಕೇಸನ್ನು ದಾಖಲಿಸಲಾಗಿದೆ ಎಂದರು.
ನಗರದಲ್ಲಿ ಇದೀಗ ವಾತಾವರಣ ಸಾಮಾನ್ಯ ಸಹಜ ಸ್ಥಿತಿಗೆ ಮರಳಿದ್ದು, ಗಣೇಶ ವಿಸರ್ಜನೆ ಸಮಯದಲ್ಲಿ ಠಾಣೆಯ ನಾಲ್ಕು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯರಲ್ಲಿ ಒಬ್ಬರಿಗೆ ಗಾಯವಾಗಿರುವ ದೂರು ಬಂದಿದ್ದು, ಪ್ರಕರಣ ದಾಖಲಾಗಿದೆ. ಬೇರೆಕಡೆಗಳಲ್ಲಿ ಭದ್ರತಾ ದೃಷ್ಟಿಯಿಂದ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದ್ದು, ಕಲ್ಲು ತೂರಾಟ ಮಾಡಿದವರ ಪತ್ತೆಗೆ ಕಾರ್ಯಾಚರಣೆ ಚುರುಕು ಮಾಡಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಶಾಂತಿಸಭೆ ನಡೆಸಲು ಸಿದ್ಧತೆ ನಡೆದಿದ್ದು, ಸಾಮಾಜಿಕ ಜಾಲಾಣತಾಣಗಳಲ್ಲಿ ಪ್ರಚೋದನಾತ್ಮಕ ಆಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ 144 ನಿಷೇಧಾಜ್ಞೆ ಅಗತ್ಯವಿಲ್ಲ. ಈ ಘಟನೆ ಬಳಿಕ ಎಲ್ಲರೂ ಸಹಕರಿಸಿ ಶಾಂತವಾಗಿ ಗಣೇಶ ವಿಸರ್ಜನೆ ಆಗಿದೆ. ಕೆಲ ಕಿಡಿಗೇಡಿಗಳ ಅರೆಸ್ಟ್ ಬಳಿಕ ಅಮಾಯಕರೆಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ಪಕ್ಕ ಮಾಹಿತಿ ಮೇರೆಗೆ ಕಿಡಿಗೇಡಿಗಳನ್ನು ಗುರುತಿಸಿ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರು.
ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರಿಗೆ ನ್ಯಾಯಾಧೀಶರಾದ ಪ್ರಶಾಂತ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.