Home ಜಾಲತಾಣದಿಂದ ‘ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತು’: ಸೆನ್ಸೊಡಯ್ನ್, ನ್ಯಾಪ್ಟೊಲ್’ಗೆ 10 ಲಕ್ಷ ರೂಪಾಯಿ ದಂಡ !

‘ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತು’: ಸೆನ್ಸೊಡಯ್ನ್, ನ್ಯಾಪ್ಟೊಲ್’ಗೆ 10 ಲಕ್ಷ ರೂಪಾಯಿ ದಂಡ !

ನವದೆಹಲಿ: ಗ್ರಾಹಕರನ್ನು ಆಕರ್ಷಿಸಲು ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತನ್ನು ನೀಡುತ್ತಿರುವ ಆರೋಪದ ಮೇಲೆ ಸೆನ್ಸೊಡಯ್ನ್ ಹಾಗೂ ನ್ಯಾಪ್ಟೋಲ್ ಆನ್‌’ಲೈನ್ ಶಾಪಿಂಗ್ ಸಂಸ್ಥೆಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು CCPA, ಎರಡೂ ಕಂಪನಿಗಳಿಗೆ ತಲಾ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದಲ್ಲದೆ ಸುಳ್ಳು ಮಾಹಿತಿಯ ಜಾಹೀರಾತುಗಳನ್ನು ತಕ್ಷಣವೇ ಹಿಂಪಡೆಯುವಂತೆ ಆದೇಶ ನೀಡಿದೆ.
ಗ್ಲಾಸ್ಕೊಸ್ಮಿತ್’ಲೈನ್ – GSK ಕಂಪನಿಯ ಸೆನ್ಸಡೈನ್ ಉತ್ಪನ್ನಗಳು ಭಾರತದ ಜಾಹೀರಾತು ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು CCPA ಹೇಳಿದೆ. ಹಲ್ಲಿನ ಆರೋಗ್ಯ ಕುರಿತಾದ ತನ್ನ ಉತ್ಪನ್ನ ಹಾಗೂ ಜಾಹೀರಾತುಗಳಲ್ಲಿ ಸೆನ್ಸಡೈನ್ ಕಂಪನಿಯು ವಿದೇಶಿ ವೈದ್ಯರನ್ನು ಬಳಸಿಕೊಳ್ಳುತ್ತಿದೆ ಇದು
ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಸೆಕ್ಷನ್ 2 [28]ರ ಉಲ್ಲಂಘನೆಯಾಗಿದೆ. ಹೀಗಾಗಿ ಆದೇಶ ದೊರೆತ ಏಳು ದಿನಗಳ ಒಳಗಾಗಿ ಜಾಹೀರಾತುಗಳನ್ನು ಹಿಂಪಡೆಯುವಂತೆ ಸೂಚಿಸಲಾಗಿದೆ.
ಇದಲ್ಲದೆ, “60 ಸೆಕೆಂಡುಗಳಲ್ಲಿ ಹಲ್ಲು ನೋವಿಗೆ ವಿದಾಯ, ವಿಶ್ವದಾದ್ಯಂತ ದಂತವೈದ್ಯರಿಂದ ಶಿಫಾರಸು ಮಾಡಲ್ಪಟ್ಟಿದೆ”, “ವಿಶ್ವದ ನಂ.1 ಸೂಕ್ಷ್ಮತೆಯ ಟೂತ್‌ಪೇಸ್ಟ್” ಮತ್ತು “ವೈದ್ಯಕೀಯವಾಗಿ ಸಾಬೀತಾಗಿರುವ ಪರಿಹಾರ’ ಎಂಬಿತ್ಯಾದಿ ವಿವಿಧ ವಾಗ್ದಾನಗಳ ಕುರಿತು 15 ದಿನಗಳೊಳಗೆ ವರದಿಯನ್ನು ಸಲ್ಲಿಸುವಂತೆ CCPA ಡೈರೆಕ್ಟರ್ ಜನರಲ್, ತನಿಖಾ ವಿಭಾಗಕ್ಕೆ ನಿರ್ದೇಶನ ನೀಡಿದೆ.

ಸೆನ್ಸಡೈಯ್ನ್ ಜೊತೆಗೆ ನ್ಯಾಪ್ಟೋಲ್ ಆನ್‌’ಲೈನ್ ಶಾಪಿಂಗ್ ವೈಬ್’ಸೈಟ್’ಗೂ CCPA 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಫೆಬ್ರವರಿ 2 ರಂದು ನಾಪ್ಟೋಲ್ ವಿರುದ್ಧ ಆದೇಶ ಜಾರಿಗೊಳಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
“ಸೆಟ್ ಆಫ್ 2 ಗೋಲ್ಡ್ ಜ್ಯುವೆಲರಿ”, “ಮ್ಯಾಗ್ನೆಟಿಕ್ ನೀ ಸಪೋರ್ಟ್” ಮತ್ತು “ಆಕ್ಯುಪ್ರೆಶರ್ ಯೋಗ ಸ್ಲಿಪ್ಪರ್ಸ್” ನಂತಹ ನಕಲಿ ಎನ್ನಬಹುದಾದ ಉತ್ಪನ್ನಗಳ ಜಾಹೀರಾತುಗಳನ್ನು ನಿಲ್ಲಿಸುವಂತೆ ಕಂಪನಿಗೆ ಸೂಚನೆಯನ್ನು ಕೊಟ್ಟಿದೆ.

ನ್ಯಾಪ್ಟೋಲ್ ಕಂಪನಿಯ 24X7 ಚಾನೆಲ್, ವಿವಿಧ ಭಾಷೆಗಳಲ್ಲಿ ದೇಶಾದ್ಯಂತ ಪ್ರತಿದಿನವೂ ಪ್ರಸಾರವಾಗುವುದರಿಂದ ಹಲವಾರು ಗ್ರಾಹಕರನ್ನು ತಪ್ಪುದಾರಿಗೆಳೆಯಲಾಗುತ್ತಿದೆ.
ಈ ಚಾನಲ್’ಗಳಲ್ಲಿ ರೆಕಾರ್ಡ್ ಮಾಡಿದ ಸಂಚಿಕೆಯನ್ನು ನೇರ ಪ್ರಸಾರ ಎಂದು ಹೇಳುವ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಉತ್ಪನ್ನಗಳು ಹೇರಳವಾಗಿ ಲಭ್ಯವಿದ್ದರೂ ಸಹ, ಕೆಲವೇ ಲಭ್ಯವಿದೆ, ತಕ್ಷಣವೇ ಖರೀದಿಸಿ ಎಂದು ಗ್ರಾಹಕರನ್ನು ವಂಚಿಸಲಾಗುತ್ತದೆ ಎಂದು CCPA ಹೇಳಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಅಂಕಿಅಂಶಗಳ ಪ್ರಕಾರ ಜೂನ್ 2021 ರಿಂದ ಈ ವರ್ಷದ ಜನವರಿ 25 ರವರೆಗೆ ನಾಪ್ಟೋಲ್ ವಿರುದ್ಧ 399 ದೂರುಗಳು ದಾಖಲಾಗಿದೆ. ಈ ಕುರಿತು 15 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ CCPA ನ್ಯಾಪ್ಟೋಲ್‌ಗೆ ನಿರ್ದೇಶಿಸಿದೆ.

Join Whatsapp
Exit mobile version