Home ಟಾಪ್ ಸುದ್ದಿಗಳು ಮಾಧ್ಯಮ ಹೇಳಿಕೆ ನೀಡುವಂತಿಲ್ಲ, ಅಂತಾರಾಷ್ಟ್ರೀಯ ಕರೆ ಮಾಡುವಂತಿಲ್ಲ: ಸುಧಾ ಜಾಮೀನಿಗೆ ಎನ್ಐಎ ನ್ಯಾಯಾಲಯದ ಷರತ್ತುಗಳು

ಮಾಧ್ಯಮ ಹೇಳಿಕೆ ನೀಡುವಂತಿಲ್ಲ, ಅಂತಾರಾಷ್ಟ್ರೀಯ ಕರೆ ಮಾಡುವಂತಿಲ್ಲ: ಸುಧಾ ಜಾಮೀನಿಗೆ ಎನ್ಐಎ ನ್ಯಾಯಾಲಯದ ಷರತ್ತುಗಳು

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್ ಅವರನ್ನು ಡಿಫಾಲ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಎನ್ಐಎ ವಿಶೇಷ ನ್ಯಾಯಾಲಯ ಕೆಲ ಷರತ್ತುಗಳನ್ನು ವಿಧಿಸಿದೆ.


ವಿಧಿಸಲಾದ ಷರತ್ತುಗಳಲ್ಲಿ 50,000 ಜಾಮೀನು ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಭದ್ರತೆಯನ್ನು ನೀಡಬೇಕಿದೆ. ಅಲ್ಲದೆ ತನ್ನ ವಿರುದ್ಧದ ಕ್ರಿಮಿನಲ್ ವಿಚಾರಣೆ ಕುರಿತು ಪತ್ರಿಕೆ, ಇಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಹ ಆರೋಪಿಗಳೊಂದಿಗೆ ಅಥವಾ ಇಂತಹುದೇ ಚಟುವಟಿಕೆಗಳೊಂದಿಗೆ ತೊಡಗಿರುವ ಯಾವುದೇ ವ್ಯಕ್ತಿಗಳೊಂದಿಗೆ ಆಕೆ ಸಂಪರ್ಕದಲ್ಲಿರುವಂತಿಲ್ಲ ಮತ್ತು ಅಂತಾರಾಷ್ಟ್ರೀಯ ಫೋನ್ ಕರೆ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿದೆ.


ಸುಧಾ ಅವರು ಮುಂಬೈ ಎನ್ಐಎ ವಿಶೇಷ ನ್ಯಾಯಾಲಯದ ವ್ಯಾಪ್ತಿಯಲ್ಲೇ ಇರಬೇಕು. ಅನುಮತಿ ಇಲ್ಲದೆ ನ್ಯಾಯವ್ಯಾಪ್ತಿ ತೊರೆಯುವಂತಿಲ್ಲ. ಸೂಚಿಸಿದ ವಲಯ ಬಿಟ್ಟು ಆಚೆ ತೆರಳಬೇಕಿದ್ದರೆ ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ವೇಳಾಪಟ್ಟಿ ಕುರಿತಂತೆಯೂ ವಿವರಿಸಬೇಕು. ತನ್ನ ಹೊಸ ವಾಸಸ್ಥಳ, ಸಂಪರ್ಕ ವಿವರಗಳು, ತನ್ನೊಂದಿಗೆ ಉಳಿದುಕೊಳ್ಳುವ ವ್ಯಕ್ತಿಗಳ ವಿವರ , ಶ್ಯೂರಿಟಿಗಳ ಬಗ್ಗೆ ಎನ್ಐಎಗೆ ತಿಳಿಸಬೇಕು. ಭಾರದ್ವಾಜ್ ತನ್ನ ಗುರುತನ್ನು ಸಾಬೀತುಪಡಿಸುವ ಎರಡು ದಾಖಲೆಗಳನ್ನು ಸಲ್ಲಿಸಿದ ನಂತರ, ಎನ್ಐಎ ನೇರ ಅಥವಾ ವರ್ಚುವಲ್ ವಿಧಾನದ ಮೂಲಕ ವಿಳಾಸ ದೃಢೀಕರಿಸಬೇಕು.


ಸುಧಾ ಅವರು ಪ್ರತಿ ನಿಗದಿತ ದಿನದಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಮತ್ತು ವಾಟ್ಸಾಪ್ ವೀಡಿಯೊ ಕರೆ ಮೂಲಕ ಹದದಿನೈದು ದಿನಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಡಿಫಾಲ್ಟ್ ಜಾಮೀನು ಮಂಜೂರು ಮಾಡಿ ಬಾಂಬೆ ಹೈಕೋರ್ಟ್ ಡಿ.1ರಂದು ತೀರ್ಪು ನೀಡಿತ್ತು. ಅದರ ಪ್ರಕಾರ ವಿಶೇಷ ನ್ಯಾಯಾಧೀಶರಾದ ಡಿ ಇ ಕೊಥಲಿಕರ್ ಈ ಆದೇಶ ನೀಡಿದ್ದಾರೆ.

Join Whatsapp
Exit mobile version