ನವದೆಹಲಿ: ಕಳೆದ ವರ್ಷ ಡಿಸೆಂಬರ್ 19 ರಂದು ದೆಹಲಿಯಲ್ಲಿ ಸಂಘಪರಿವಾರ ಆಯೋಜಿಸಿದ ‘ಧರ್ಮ ಸಂಸದ್’ ಕಾರ್ಯಕ್ರಮದಲ್ಲಿ ಭಾಷಣಕಾರರು ಮುಸ್ಲಿಮರ ವಿರುದ್ಧ ಯಾವುದೇ ದ್ವೇಷ ಭಾಷಣ ಮಾಡಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರೀಕರಿಸಲಾದ ವೀಡಿಯೋ ಮತ್ತು ಇತರ ವಸ್ತುಗಳ ಬಗ್ಗೆ ಆಳವಾದ ತನಿಖೆಯ ಸಂದರ್ಭದಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವುದು ಕಂಡು ಬಂದಿಲ್ಲ. ಆದ್ದರಿಂದ ಉದ್ದೇಶಿತ ವೀಡಿಯೋ ಕ್ಲಿಪ್ ನ ಕುರಿತು ತನಿಖೆ ಮತ್ತು ಅವಲೋಕನದ ಬಳಿಕ ಈ ಭಾಷಣದಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಭಾಷಣವನ್ನು ಮಾಡಲಾಗಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ದೆಹಲಿ ಪೊಲೀಸರು ಸುಪ್ರೀಮ್ ಕೋರ್ಟ್ ಅಫಿದಾವಿತ್ ಸಲ್ಲಿಸಿದ್ದಾರೆ.
ದೆಹಲಿ ಪೊಲೀಸರ ತನಿಖೆ ಆಧಾರದಲ್ಲಿ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ದೂರುಗಳನ್ನು ಕೊನೆಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರನ್ನು ಮೊದಲು ಸಂಪರ್ಕಿಸದೆ ಸುಪ್ರೀಮ್ ಕೋರ್ಟ್ ಗೆ ತೆರಳಿರುವ ಅರ್ಜಿದಾರರ ನಡೆಯನ್ನು ದೆಹಲಿ ಪೊಲೀಸರು ಪ್ರಶ್ನಿಸಿದ್ದಾರೆ.
ಕೋಮು ದ್ವೇಷದ ಭಾಷಣಕಾರರೊಂದಿಗೆ ದೆಹಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಅರ್ಜಿದಾರರು ಮಾಡಿರುವ ಆರೋಪ ಆಧಾರ ರಹಿತ ಮತ್ತು ಕಪೋಲಕಲ್ಪಿತ ಎಂದು ದೆಹಲಿ ಪೊಲೀಸರು ಸುಪ್ರೀಮ್ ಕೋರ್ಟ್ ಗೆ ತಿಳಿಸಿದ್ದಾರೆ.
ಜನವರಿ 12 ರಂದು, ಉತ್ತರಾಖಂಡ ಸರ್ಕಾರ, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ “ಧರ್ಮ ಸಂಸದ್” ದ್ವೇಷ ಭಾಷಣ ಪ್ರಕರಣದ ಅರ್ಜಿಗೆ ಪ್ರತಿಕ್ರಿಯಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
“ಇಂಟರ್‌ನೆಟ್‌ನಲ್ಲಿ ಹತ್ಯಾಕಾಂಡದ ಮುಕ್ತ ಕರೆಗಳು ಲಭ್ಯವಿದ್ದರೂ ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅರ್ಜಿದಾರದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಮಧ್ಯೆ ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಏಪ್ರಿಲ್ 22 ರೊಳಗೆ ಸ್ಥಿತಿ ವರದಿ ಸಲ್ಲಿಸುವಂತೆ ಬುಧವಾರ ಸುಪ್ರೀಂ ಕೋರ್ಟ್ ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ನೀಡಿದೆ.
“ಸಂಸದ್ ತಮ್ಮ ಧರ್ಮವನ್ನು ಬಲ ಪಡಿಸಲು, ಉಳಿಸಲು ನಡೆಯಿತೇ ಹೊರತು, ಬೇರೆ ಧರ್ಮದ ಬಗೆಗೆ ದ್ವೇಷ ಕಾರಲು ನಡೆಯಲಿಲ್ಲ. ಯಾವುದೇ ಧರ್ಮದವರನ್ನು ಜನಾಂಗೀಯ ಕೊಲೆಗೆ ಕರೆ ನೀಡಿದ್ದೆಲ್ಲ ಆಗಿಲ್ಲ” ಎಂಬುದು ದಿಲ್ಲಿ ಪೋಲೀಸರ ಹೇಳಿಕೆ.
ಮುಸ್ಲಿಮರ ಜನಾಂಗವನ್ನು ಮುಗಿಸುವ ಮಾದರಿಯ ದ್ವೇಷ ಭಾಷಣ ಮಾಡಿದ್ದಾಗಿ ಮೂವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸುದರ್ಶನ್ ನ್ಯೂಸ್ ಚಾನೆಲ್ ನ ಸುರೇಶ್ ಚಾವಂಕೆಯವರ ಭಾಷಣವನ್ನು ಎತ್ತಿ ಹೇಳಲಾಗಿತ್ತು.
“ಮೂವರ ದೂರನ್ನೂ ಗಮನಿಸಿ ಆಳವಾದ ತನಿಖೆ ನಡೆಸಿದೆವು. ವೀಡಿಯೋಗಳನ್ನು ಕೂಡ ವಿಶ್ಲೇಷಿಸಲಾಯಿತು. ಆದರೆ ದೂರುದಾರರು ದೂರಿದಂತೆ ಅವುಗಳಲ್ಲಿ ಏನೂ ಕಂಡು ಬರಲಿಲ್ಲ. ಯಾವುದೇ ಜನಾಂಗವನ್ನು ಇಲ್ಲವೇ ಒಂದು ನಿಶ್ಚಿತ ಜನಾಂಗವನ್ನು ಗುರಿಯಾಗಿರಿಸಿ ಅದರಲ್ಲಿ ಏನೂ ಮಾತನಾಡಿಲ್ಲ.”ಎಂಬುದು ಪೋಲೀಸರ ಅಫಿಡವಿಟ್ ನ ಮುಖ್ಯಾಂಶ.
ಮುಖ್ಯವಾಗಿ ಮುಸ್ಲಿಂ ಜನರ ಹತ್ಯೆಗೆ ನೇರ ಕರೆ ನೀಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಯ್ಯ ಇಲ್ಲ.
ಮಾತಿನ ಮೂಲಭೂತ ಹಕ್ಕುಗಳ ಸಂವಿಧಾನದ 19(1) ವಿಧಿ ಮತ್ತು ಅದರ ವಿವರಣೆಯ (19) ವಿಧಿ ಮೀರಿ ಯಾರೂ ಮಾತನಾಡಿಲ್ಲ. ಸ್ವಧರ್ಮ ರಕ್ಷಣೆ ಮಾತ್ರ ಧರ್ಮ ಸಂಸದ್ ನ ಗುರಿಯಾಗಿತ್ತು ಎಂದು ಹೇಳಲಾಗಿದೆ.
ಅರ್ಜಿದಾರರು ತಪ್ಪು ಮಾಹಿತಿ ನೀಡಿದ್ದಾರೆ. ದೂರುದಾರರು ಮಾತುಗಳನ್ನು ತಮಗೆ ಬೇಕಾದಂತೆ ಮಾಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪೋಲೀಸರು ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ಸ್ಪಷ್ಟ ಮತ್ತು ಈಗಿನ ಅಪಾಯ ಎಂಬ ಅಮೆರಿಕದ ಕೋರ್ಟಿನ ತೀರ್ಪಿನಂತೆ ಈ ಅರ್ಜಿಗಳನ್ನು ಪರಿಗಣಿಸಬೇಕು. ಭಾಷಣಗಳಲ್ಲಿ ತಪ್ಪಿರಲಿಲ್ಲವಾದ್ದರಿಂದ ಪೋಲೀಸರು ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಬರುವುದಿಲ್ಲ ಎಂದು ಪೊಲೀಸರು ಕೋರ್ಟಿಗೆ ಚಮತ್ಕಾರಿಕವಾಗಿ ಹೇಳಿದ್ದಾರೆ.